Drumstic : ಕಾಯಿ ಕಾಯಿ ನುಗ್ಗೇಕಾಯಿ…ಏನಿದರ ಮಹಿಮೆ? ಇದನ್ನು ತಿಂದರೆ ಏನು ಲಾಭ ?
ಅಡಿಗೆಯಲ್ಲಿ ಬಳಕೆಯಾಗುವ ನುಗ್ಗೆಕಾಯಿ ಅನೇಕ ಜನರಿಗೆ ಪ್ರಿಯವಾದ ತರಕಾರಿಯಾಗಿದ್ದು, ಖಾದ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುವುದು ತಿಳಿದಿರುವ ವಿಷಯವೇ ಆದರೆ ಇದರಲ್ಲಿ ಅಡಗಿರುವ ಔಷಧೀಯ ಗುಣ ಅನೇಕ ರೋಗಗಳಿಗೆ ರಾಮ ಬಾಣದಂತೆ ಕಾರ್ಯನಿರ್ವಹಿಸುವುದು ಹಲವರಿಗೆ ತಿಳಿದಿಲ್ಲ. ಕೇವಲ ನುಗ್ಗೆಕಾಯಿ ಅಷ್ಟೇ ಅಲ್ಲದೆ ನುಗ್ಗೆ ಸೊಪ್ಪಿನಲ್ಲಿ ಆರೋಗ್ಯವನ್ನು ವೃದ್ಧಿಸುವ ಹಲವಾರು ಅಂಶಗಳಿವೆ.
ವಿವಿಧ ಖಾದ್ಯಗಳ ಮೂಲಕ ಜನರಲ್ಲಿ ಬಾಯೂರಿಸುವ ನುಗ್ಗೆ ಕಾಯಿ ಮತ್ತು ಸೊಪ್ಪಿನಿಂದ ಅನೇಕ ಪ್ರಯೋಜನಗಳಿವೆ. ಅದ್ಯಾವುದೆಂದು ತಿಳಿಯೋಣ ಬನ್ನಿ.
ಅನೇಕ ರೀತಿಯ ಸೋಂಕುಗಳಿಂದ ಬಚಾವಾಗಲು ನುಗ್ಗೆಕಾಯಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ವೃದ್ದಿಸಲು ನೆರವಾಗುತ್ತದೆ. ನುಗ್ಗೆ ಸೊಪ್ಪು ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ.
ನುಗ್ಗೆಕಾಯಿ ಎಲೆಗಳು ವಿವಿಧ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಸತು ಮತ್ತು ಇತರ ಸಕ್ರಿಯ ಘಟಕಗಳನ್ನು ಒಳಗೊಂಡಿರುವುದರಿಂದ ಕ್ಯಾನ್ಸರ್ ಕೋಶಗಳು ಮತ್ತು ಸ್ವತಂತ್ರ ರಾಡಿಕಲ್ಗಳ ಪರಿಣಾಮಗಳನ್ನು ನಿಯಂತ್ರಣ ಗೊಳಿಸಲು ನೆರವಾಗುತ್ತವೆ. ಕ್ಯಾನ್ಸರ್ ರೋಗದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿಯೂ ಕೂಡಾ ನುಗ್ಗೆ ಎಲೆಗಳು ಸಹಕಾರಿಯಾಗಿವೆ.
ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಅಂಶ ಹೆಚ್ಚು ಇರುವ ಕಾರಣ ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೆ ನುಗ್ಗೆ ಸೊಪ್ಪಿನಲ್ಲಿ ಲೂಟಿನ್ ಅಂಶವೂ ಹೆಚ್ಚಾಗಿರುವುದರಿಂದ ಕಣ್ಣುಗಳಿಗೆ ಒತ್ತಡ ಮತ್ತು ಕುರುಡುತನಕ್ಕೆ ಕಾರಣವಾಗುವ ಗ್ಲೂಕೋಮ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ತಡೆಯುತ್ತದೆ.
ನುಗ್ಗೆಸೊಪ್ಪುಆಂಟಿಲ್ಸರ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಹೊಟ್ಟೆಗಳಲ್ಲಿನ ಹುಣ್ಣುಗಳ ಅಪಾಯವನ್ನು ತಡೆಯಲು ಸಹಕರಿಸಿ,ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಷ್ಟೆ ಅಲ್ಲ ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಇದು ಅಧೀಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ನುಗ್ಗೆಕಾಯಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದರೊಂದಿಗೆ ಅಸಿಡಿಟಿ, ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಒತ್ತಡ, ದೈಹಿಕ ಶ್ರಮದ ಕೊರತೆಯಿಂದ ಸಕ್ಕರೆ ಕಾಯಿಲೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಸಂಶೋಧನೆಯೊಂದರ ಪ್ರಕಾರ ನುಗ್ಗೆ ಸೊಪ್ಪಿನಲ್ಲಿ ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ಅಂಶಗಳು ಹೆಚ್ಚಿರುವ ಕಾರಣ ಇದು ಮಧುಮೇಹ ಕಾಯಿಲೆ ಇರುವವರಿಗೆ ನುಗ್ಗೆ ಸೊಪ್ಪು ಸಹಕಾರಿಯಾಗಿದ್ದು, ಅಲ್ಲದೆ ಸೊಪ್ಪಿನಲ್ಲಿ ವಿಟಮಿನ್ ಡಿ ಹೆಚ್ಚಾಗಿರುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ.