ಮತ್ತೊಮ್ಮೆ ರೆಪೊ ದರ ಹೆಚ್ಚಳದ ಶಾಕ್ ನೀಡಿದ RBI!
ಮುಂಬೈ: ಆರ್‌ಬಿಐ ರೆಪೊ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದ್ದು, ಜನ ಸಾಮಾನ್ಯರಿಗೆ ಸಾಲದ ಬಡ್ಡಿ ಚಿಂತೆ ಹೆಚ್ಚಿಸಿದೆ. ಇದೀಗ ಮತ್ತೆ ಹಣದುಬ್ಬರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಆರ್‌ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಲಿದೆ.
ಇದರ ಬೆನ್ನಲ್ಲೇ ಎಲ್ಲಾ ರೀತಿಯ ಸಾಲದ ಬಡ್ಡಿದರಗಳು ಹೆಚ್ಚಳವಾಗಿ, ನಿಶ್ಚಿತ ಠೇವಣಿ, ಉಳಿತಾಯ ಠೇವಣಿ ಬಡ್ಡಿ ದರ ಕೂಡ ಸ್ವಲ್ಪ ಹೆಚ್ಚಾಗಲಿದೆ. ಸೆಪ್ಟೆಂಬರ್ 28 ರಿಂದ 30ರವರೆಗೆ ಆರ್.ಬಿ.ಐ. ಆರ್ಥಿಕ ಪರಾಮರ್ಶೆ ಸಭೆ ನಡೆಯಲಿದ್ದು, ಸಭೆಯಲ್ಲಿ ರೆಪೊ ದರವನ್ನು ಶೇಕಡ 0.35 ರಿಂದ ಗರಿಷ್ಠ ಶೇಕಡ 0.50 ವರೆಗೂ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹಾಲಿ ಶೇಕಡ 5.40 ರಷ್ಟು ರೆಪೊ ದರ ಶೇಕಡ 5.90 ವರೆಗೂ ತಲುಪಬಹುದು. ಈ ಮೂಲಕ ರೆಪೊ ದರ ಹೆಚ್ಚಿಸಿ, ಬಡ್ಡಿದರ ಏರಿಕೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೊ ದರ. ಆರ್ ಬಿಐ ನಿರ್ದಿಷ್ಟ ದರದಲ್ಲಿ ಈ ಬ್ಯಾಂಕುಗಳಿಗೆ ಸಾಲ ನೀಡುತ್ತದೆ. ರೆಪೊ ದರ ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. ಉದಾಹರಣೆಗೆ ಆರ್ ಬಿಐ ರೆಪೋ ದರ ಇಳಿಕೆ ಮಾಡಿದ್ರೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಇದ್ರಿಂದ ಆರ್ಥಿಕತೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಅದೇ ರೆಪೊ ದರದಲ್ಲಿ ಏರಿಕೆ ಮಾಡಿದ್ರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಹೀಗಾಗಿ ಹಣದುಬ್ಬರ ಏರಿಕೆಯಾಗಿರುವ ಸಮಯದಲ್ಲಿ ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತದೆ,
ರೆಪೊ ದರ ಏರಿಕೆಯಿಂದ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿವೆ. ಹೀಗಾಗಿ ಗೃಹಸಾಲಗಳು , ವಾಹನಸಾಲಗಳು ಸೇರಿದಂತೆ ಎಲ್ಲ ವಿಧದ ಸಾಲಗಳ ಬಡ್ಡಿದರ ಹೆಚ್ಚಳವಾಗಲಿದೆ. ಈಗಾಗಲೇ ಗೃಹ, ವಾಹನ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕುಗಳು ಒಮ್ಮೆ ಹೆಚ್ಚಳ ಮಾಡಿ ಆಗಿದೆ. ಈಗ ಇನ್ನೊಮ್ಮೆ ಹೆಚ್ಚಳ ಮಾಡಲಿದ್ದು, ಸಾಲ ಪಡೆದವರ ಮೇಲಿನ ಹೊರೆ ಹೆಚ್ಚಿದೆ.