ಇನ್ನೂ ಆಗದ ಅನುದಾನಿತ ಶಿಕ್ಷಕರ ನೇಮಕಾತಿ ; ದಶಕಗಳಿಂದ ನಂಬಿ ಕೆಲಸ ಮಾಡಿದ ಶಿಕ್ಷಕರಿಗೆ ಏನಿದೆ ಈ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ?

ಹೌದು. ನಾನು ಹೇಳುತ್ತಿರುವುದು ಕರ್ನಾಟಕ ರಾಜ್ಯದಲ್ಲಿರುವ ಅನುದಾನಿತ ಕನ್ನಡ ಪ್ರೌಢಶಾಲೆಗಳ ಬಗ್ಗೆ. ಹಿಂದೆ ಸರ್ಕಾರ ಸಂಕಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಕೈಹಿಡಿಯಲು 1986 ರಿಂದ1995 ತನಕ ಅನುದಾನವನ್ನು ನೀಡಿತ್ತು, ಈಗ ಅದೇ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಎದುರಾಗಿದೆ. ಮರಣ ಮತ್ತು ನಿವೃತ್ತಿ ಕಾರಣಗಳಿಂದ 2016ರಿಂದ 2020 ರ ವರೆಗೆ ಸುಮಾರು ಏಳು ಸಾವಿರ ಹುದ್ದೆಗಳು ಖಾಲಿ ಇವೆ.

 

ಕಳೆದ ಸಪ್ಟೆಂಬರ್ 5ರಂದು ವಿಜ್ರಂಭಣೆಯಿಂದ ಶಿಕ್ಷಕರ ದಿನದ ಆಚರಣೆ ಆಗಿದ್ದೇನೋ ಸರಿ. ಆದರೆ ನನ್ನಂಥ ಅನುದಾನಿತ ಅತಿಥಿ ಶಿಕ್ಷಕ ಬಳಗದಲ್ಲಿ ಮಾತ್ರ ಆ ಸಂತಸ ಸಂಭ್ರಮ ಮನೆ ಮಾಡಿಲ್ಲ ಎಂಬುದು ದುರಂತ. ಅಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಪ್ರತಿ ವರ್ಷ ಖಾಲಿಯಾಗುವ ಶಿಕ್ಷಕರ ಹುದ್ದೆಗಳನ್ನು ಮುಂಚಿತವಾಗಿಯೇ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಅದು ಕೇವಲ ಭರವಸೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬಂದಾಗ ಮಾತ್ರ ಆ ಮಾತಿಗೆ ಘನತೆ ಬರುವುದು ತಾನೇ?

2017ರಲ್ಲಿ ಆಗಿನ ಶಿಕ್ಷಣ ಸಚಿವರಾದ ಶ್ರೀ ತನ್ವೀರ್ ಸೇಠ್ ರವರು ಅನುದಾನಿತ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಸರ್ಕಾರ ಬದಲಾದ ತಕ್ಷಣ ಮೊದಲ ಆದೇಶ ಮೂಲೆಗುಂಪಾಯಿತು. ಇನ್ನು ಚುನಾವಣೆಯ ಸಂದರ್ಭದಲ್ಲಿ ದಾಳವಾಗಿ ಶಿಕ್ಷಕ ವರ್ಗವನ್ನು ಬಳಸಿಕೊಳ್ಳುವ ಮಂತ್ರಿ ಮಹೋದಯರು, ಜನಪ್ರತಿನಿಧಿಗಳು, ಚುನಾವಣಾ ನಂತರದಲ್ಲಿ ಶಿಕ್ಷಕರ ಬೇಡಿಕೆಗಳನ್ನು ಅಲಕ್ಷಿಸುವುದು ನಮ್ಮನ್ನು ದುಃಖದ ಕೂಪಕ್ಕೆ ತಳ್ಳುತ್ತಿದೆ.

ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರು ಜೀವನ ಭದ್ರತೆ ಸಿಗಬಹುದು ಎಂಬ ಕಾರಣದಿಂದ ಕೋವಿಡ್ ಮಹಾಮಾರಿಯ ಸಂದರ್ಭದಲ್ಲೂ ತಮ್ಮ ಜೀವದ ಹಂಗನ್ನು ತೊರೆದು ಸರ್ಕಾರ ಕೈಗೊಂಡ ವಿದ್ಯಾಗಮ ಎಂಬ ಕಾರ್ಯದಲ್ಲಿ ಶಿಕ್ಷಕರು ದೇವಸ್ಥಾನ, ವಿದ್ಯಾರ್ಥಿಗಳ ಮನೆ, ಸಮುದಾಯ ಭವನ, ತಮ್ಮದೇ ಮನೆಗಳಲ್ಲಿ ವಿದ್ಯಾರ್ಥಿಗಳನ್ನು ಕರೆಯಿಸಿ ಪಾಠಪ್ರವಚನಗಳನ್ನು ಮಾಡಿದ್ದುಂಟು ಹಾಗೂ ಈಗ ನಡೆಯುತ್ತಿರುವ ಕಲಿಕಾ ಚೇತರಿಕೆ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣಕರ್ತರಾಗಿದ್ದಾರೆ.

ಇಂತಹ ಶಿಕ್ಷಕರು ತಾವು ಕೆಲಸ ನಿರ್ವಹಿಸುತ್ತಿರುವ ಶಾಲೆಯಲ್ಲಿಯೇ ತಮಗೊಂದು ನೆಲೆ ಸಿಗುವುದೆಂಬ ಆಶಾವಾದದಿಂದ ಇದ್ದರೂ ಕೂಡ ಘನ ಸರ್ಕಾರ ಹುದ್ದೆ ಭರ್ತಿಗೆ ಅವಕಾಶ ನೀಡದೇ ದಿವ್ಯ ನಿರ್ಲಕ್ಷ ತೋರಿದ್ದರಿಂದ ಅತಿಥಿ ಶಿಕ್ಷಕರ ಜೀವನವನ್ನು ತ್ರಿಶಂಕು ಸ್ಥಿತಿಯಲ್ಲಿರುವಂತಾಗಿದೆ. ದಯಮಾಡಿ ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಬೆಳಕಿಗೆ ನೆರವಾಗುತ್ತಿರುವ ಶಿಕ್ಷಕರಿಗೊಂದು ನೆಲೆಯನ್ನು ಕಲ್ಪಿಸಲು 2016ರಿಂದ 2020ರ ವರೆಗಿನ ಹುದ್ದೆಗಳ ಭರ್ತಿಗೆ ಅನುಮತಿಯನ್ನು ತಕ್ಷಣ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

ಇಂತಿ,
ವರುಣ್,ಶಿಕಾರಿಪುರ ಹಾಗೂ ನೊಂದ ಅತಿಥಿ ಶಿಕ್ಷಕ ಬಳಗ.

Leave A Reply

Your email address will not be published.