ಹಾಲು ಉತ್ಪಾದಕರಿಗೆ ಸಿಹಿ-ಗ್ರಾಹಕರಿಗೆ ಕೊಂಚ ಕಹಿ!! ರಾಜ್ಯ ಸರ್ಕಾರದ ಉಡಾಫೆತನಕ್ಕೆ ಕೆ.ಎಂ.ಎಫ್ ದಿಟ್ಟ ಉತ್ತರ!!
ಕರ್ನಾಟಕ ಹಾಲು ಉತ್ಪಾದಕರ ಮಂಡಳಿ ಕೆ.ಎಂ.ಎಫ್ ಹಾಲಿನ ದರ ರೂಪಾಯಿ 03 ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ಎಲ್ಲಾ ಕ್ಷೇತ್ರದಿಂದಲೂ ಜನತೆಗೆ ಬೆಲೆ ಏರಿಕೆಯ ಬಿಸಿ ತಾಗಿದ್ದು, ಈ ನಡುವೆ ನಂದಿನಿ ಹಾಲಿನ ದರವೂ ಹೆಚ್ಚಾಳವಾಗುವ ಸಂಭವಿದ್ದು ,ಕೆ.ಎಂ.ಎಫ್ ಈ ಬಗ್ಗೆ ನಿರ್ಣಯವೊಂದನ್ನು ಕೈಗೊಂಡಿದೆ.
ಕಳೆದ ಏಳೆಂಟು ತಿಂಗಳಿನಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾದರೂ ಈ ವರೆಗೆ ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ಆದೇಶ ಹೊರಡಿಸಲಿಲ್ಲ. ರೈತರು ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಂದ ಬೆಲೆ ಏರಿಕೆ ಮಾಡಲು ಒತ್ತಡ ಹೆಚ್ಚಾದ ಬೆನ್ನಲ್ಲೇ ಕೆ.ಎಂ.ಎಫ್ ತಾನೇ ಬೆಲೆ ಏರಿಸಿಕೊಳ್ಳುವುದಾಗಿ ನಿರ್ಧರಿಸಿದೆ.
ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸಭೆಯೊಂದು ನಡೆದಿದ್ದು, ಈ ಸಭೆಯಲ್ಲಿ ಪ್ರಸ್ತಾಪವಾದ ವಿಷಯಕ್ಕೆ ಎಲ್ಲರೂ ಒಮ್ಮತದಿಂದ ದನಿಗೂಡಿಸಿದ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಒಂದು ಲೀಟರ್ ಹಾಲಿಗೆ ತಲಾ ಮೂರು ರೂಪಾಯಿ ಏರಿಕೆಯಾಗಲಿದ್ದು, ಈ ಹಣವನ್ನು ಹಾಲು ಉತ್ಪಾದಕ ರೈತರಿಗೆ ನೀಡಲಾಗುತ್ತದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲವಾದರೂ, ಬೆಲೆ ಏರಿಕೆಯಾಗುವುದಂತೂ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.