ಕಣ್ಣಿನ ಸೌಂದರ್ಯ ಇಮ್ಮಡಿಗೊಳಿಸುವ ಕಾಡಿಗೆಯನ್ನು ಬಳಸುವ ಮೊದಲು ಈ ಮಾಹಿತಿ ಓದಿ!!!
ಪ್ರತಿ ಹೆಣ್ಣು ತನ್ನ ಸೌಂದರ್ಯದ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಸಾಮಾನ್ಯ. ಸುಂದರ ವದನಕ್ಕೆ ಕಣ್ಣಿಗೆ ಹಾಕುವ ಕಾಡಿಗೆ ಕೂಡ ಮೆರುಗು ನೀಡಿ ಅಂದವನ್ನು ಇಮ್ಮಡಿಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಕಣ್ಣಿನ ಅಡಿಗೆ ಕಾಡಿಗೆ ಹಾಕಿದ ಹುಡುಗೀರ ಕಣ್ಣಿಂದ ಹುಡುಗರ ನೋಟ ಕದಲದು. ಅಷ್ಟೇ ಅಲ್ಲ, ಆಕೆ ಕಣ್ಣೆದುರಿಗಿಂತ ದೂರ ಹೋದರೂ ನೋಡುಗನ ಮನಸ್ಸಿನಲ್ಲಿ ಆಕೆಯ ಕಡು ಕಪ್ಪು ಕಾಡಿಗೆ ಕಣ್ಣುಗಳು ಕಲರವ ಸೃಷ್ಟಿಸಿ, ಸಣ್ಣ ಕದನ ಮೂಡಿಸುವುದಂತೂ ಪಕ್ಕಾ. ಹಾಗಿದೆ ಕಪ್ಪು ಕಣ್ಣುಗಳ ಮೌನ ಕವಿತೆ.
ಬಹಳ ಹಿಂದಿನಿಂದಲೂ ಮಕ್ಕಳಿಗೆ ದೃಷ್ಟಿ ತಾಗದಂತೆ ಹಣೆಗೆ, ಗಲ್ಲಕ್ಕೆ ಸೇರಿದಂತೆ ಮಕ್ಕಳ ಇನ್ನಿತರ ದೇಹದ ಭಾಗಗಳಿಗೆ ಕಾಡಿಗೆಯನ್ನು ಹಚ್ಚುವುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೆ ಕಾಡಿಗೆ ಕಣ್ಣಿನ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.
ಕಣ್ಣು ಸೌಂದರ್ಯದ ಪ್ರತೀಕ. ಇವುಗಳನ್ನು ಸುಂದರವಾಗಿಡಲು ಎಷ್ಟು ನಿಗಾ ವಹಿಸಿದರೂ ಕಡಿಮೆಯೆನಿಸುತ್ತದೆ. ವಿಟಮಿನ್ ಬಿ ಯ ಕೊರತೆ, ನಿದ್ರಾಹೀನತೆ, ಅತಿಯಾದ ಆಯಾಸದಿಂದ ಕಣ್ಣುಗಳು ಕಾಂತಿಯನ್ನು ಕಳೆದುಕೊಳ್ಳುತ್ತವೆ. ಈ ಕಾಂತಿಹೀನ ಕಣ್ಣುಗಳನ್ನು ಸುಂದರವಾಗಿಡಲು ಕಾಡಿಗೆ ಅಥವಾ ಕಾಜಲ್ ಬಳಸಿದರೆ, ಕಣ್ಣಿನ ಅಂದ ಹೆಚ್ಚುತ್ತದೆ.
ಕಾಡಿಗೆಯನ್ನು ಸುಮಾರು 5೦೦೦ ವರ್ಷಗಳ ಪುರಾತನ ಇತಿಹಾಸ ಹೊಂದಿದ್ದು, ಔಷಧ ತಯಾರಿಕೆಯಲ್ಲಿ ಮತ್ತು ಸೌಂದರ್ಯ ಕಾಪಾಡಲು ಬಳಸುತ್ತಿದ್ದರು. ತುಪ್ಪ, ತರಕಾರಿ ಎಣ್ಣೆ, ಕರ್ಪೂರವನ್ನು ಬಳಸಿ ಕಾಡಿಗೆಯನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ಅಲ್ಲದೆ ಆಯುರ್ವೇದದಲ್ಲೂ ಇದಕ್ಕೆ ಮಹತ್ವದ ಸ್ಥಾನವಿದೆ. ಕಾಲ ಕಳೆದಂತೆ ಕಾಡಿಗೆ ತಯಾರಿಕೆಯು ಒಂದು ವ್ಯಾಪಾರವಾಗಿ ಬದಲಾಗಿರುವ ಕಾರಣ ರಾಸಾಯನಿಕ ಅಂಶಗಳನ್ನು ಬಳಸಲಾಗುತ್ತಿದೆ.
ಮೇಕಪ್ ಒಂದು ಕಲೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅಂದ ಹೆಚ್ಚುವುದರ ಜೊತೆಗೆ ರೋಗವನ್ನು ಗುಣಪಡಿಸುವ ಔಷಧೀಯವಾಗಿ ಕೂಡ ಬಳಸಲಾಗುತ್ತದೆ. ಯಾವುದೇ ಸಮಾರಂಭಕ್ಕೆ ಕಾಡಿಗೆ ಹಚ್ಚಿ ಹೊರಟಾಗ ಒಂದು ಕಂಪ್ಲೀಟ್ ಲುಕ್ ಕೊಡುವ ಕಾಡಿಗೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. ನೈಸರ್ಗಿಕವಾಗಿ ತಯಾರಿಸುವ ಕಾಡಿಗೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಾಡಿಗೆಗೆ ಕೆಮಿಕಲ್ ಬಳಸಲಾಗಿರುತ್ತದೆ. ಹಾಗಾಗಿ ಹೆಚ್ಚಿನವರಿಗೆ ಕಣ್ಣು ಉರಿಯುವುದು, ಕಣ್ಣಲ್ಲಿ ನೀರು ಬರುವುದು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ನೈಸರ್ಗಿಕಾಗಿ ತಯಾರಿಸುವ ಕಾಡಿಗೆಯ ಬಗ್ಗೆ ಮಾಹಿತಿ
ಹರಳೆಣ್ಣೆ ದೀಪದಿಂದ ಕಾಡಿಗೆಯನ್ನು ತಯಾರಿಸಬಹುದು. ಒಂದು ದೀಪದ ಕಂಬದಲ್ಲಿ ಹರಳೆಣ್ಣೆಯನ್ನು ಹಾಕಿ, ಬತ್ತಿಯ ಸಹಾಯದಿಂದ ದೀಪವನ್ನು ಉರಿಸಬೇಕು. ದೀಪದ ಜ್ವಾಲೆಗೆ ಮೇಲ್ಮುಖವಾಗಿ ಒಂದು ಹಿತ್ತಾಳೆಯ ತಟ್ಟೆಯನ್ನು ಇಡಬೇಕು. ಅನಂತರ ಇದರಲ್ಲಿ ಸಂಗ್ರಹವಾದ ಕಪ್ಪನ್ನು ಬೆಣ್ಣೆಯೊಂದಿಗೆ ಬೆರೆಸಬೇಕು, ಸ್ವಲ್ಪವೇ ಬೆಣ್ಣೆಯೊಂದಿಗೆ ಕಪ್ಪನ್ನು ಕೈಯಿಂದ ಕಲೆಸಿ, ಒಂದು ಡಬ್ಬಿಯಲ್ಲಿ ತೆಗೆದಿಟ್ಟು, ಪ್ರತಿದಿನ ಕಣ್ಣಿಗೆ ಬಳಸುವುದರಿಂದ ಕಣ್ಣುಗಳ ಕಾಂತಿ ಹೆಚ್ಚುತ್ತದೆ.
ನೈಸರ್ಗಿಕವಾಗಿ ತಯಾರಿಸುವ ಕಾಡಿಗೆಯಲ್ಲಿ ಹರಳೆಣ್ಣೆಯನ್ನು ಉಪಯೋಗಿಸುವುದರಿಂದ ಕಣ್ಣನ್ನು ತಂಪಾಗಿರಿಸಲು ನೆರವಾಗುತ್ತದೆ. ಶುದ್ಧ ಹರಳಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಕಣ್ಣಿನ ರೆಪ್ಪೆ ದಪ್ಪ ಹಾಗೂ ಕಪ್ಪಾಗಿರುವಂತೆ ನೋಡಿಕೊಳ್ಳುತ್ತದೆ. ಕಾಡಿಗೆ ಹಚ್ಚುವುದರಿಂದ ಕಣ್ಣಿಗೆ ಆಗುವ ಒತ್ತಡ ನಿವಾರಿಸುವುದಲ್ಲದೆ ಸುಸ್ತಾಗುವುದನ್ನು ತಡೆಗಟ್ಟಿ ಆರೋಗ್ಯವಾಗಿರಿಸುತ್ತದೆ.
ಪ್ರತೀ ದಿನ ಕಣ್ಣಿಗೆ ಕಾಡಿಗೆ ಹಚ್ಚುವುದು ಆರೋಗ್ಯಕ್ಕೆ ಒಳ್ಳೆಯದು. ಕಾಡಿಗೆ ತಯಾರಿಸಲು ತುಪ್ಪವನ್ನು ಕೂಡ ಬಳಸಲಾಗುತ್ತದೆ. ತುಪ್ಪವು ಡಾರ್ಕ್ ಸರ್ಕಲ್ ಅನ್ನು ದೂರ ಮಾಡುತ್ತದೆ. ಕಣ್ಣು ರೆಪ್ಪೆಗಳ ಕೆಳಗೆ ಉಳಿದಂತಹ ಮೇಕಪ್ ಅನ್ನು ತೆಗೆದುಹಾಕುತ್ತದೆ.
ಪ್ರತೀ ದಿನ ಕಣ್ಣಿಗೆ ಕಾಡಿಗೆ ಸಣ್ಣ ಸಣ್ಣ ಧೂಳುಗಳು ಹೋಗಿರುತ್ತವೆ. ಕಾಡಿಗೆ ಹಚ್ಚುವುದರಿಂದ ಕಣ್ಣು ಸ್ವಚ್ಛವಾಗುವುದಲ್ಲದೆ ಕಣ್ಣಿನ ದೃಷ್ಟಿಯೂ ಕಾಯ್ದುಕೊಳ್ಳುತ್ತದೆ. ಅಲ್ಲದೆ ಕಣ್ಣಿನ ರೆಪ್ಪೆಯು ಉದ್ದ ಬೆಳೆಯುವಂತೆ ಮಾಡುತ್ತದೆ. ಪುನರುತ್ಪಾದಕ ಗುಣಗಳು ಕಂಚು ಮತ್ತು ಬೆಳ್ಳಿಯಲ್ಲಿರುವುದರಿಂದ ಕಣ್ಣಿನ ಅಲರ್ಜಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಬಾದಾಮಿ, ಬತ್ತಿ, ಹರಳೆಣ್ಣೆ, ಮತ್ತು ತುಪ್ಪ ಬಳಸಿ ಕಾಜಲ್ ತಯಾರಿಸಬಹುದು. ಮೊದಲು ಒಂದು ದೀಪದ ಕಂಬವನ್ನು ತೆಗೆದುಕೊಂಡು ಇದಕ್ಕೆ ಹರಳೆಣ್ಣೆ ಹಾಕಬೇಕು. ಹತ್ತಿಯ ಬತ್ತಿಯ ಸಹಾಯದಿಂದ ದೀಪವನ್ನು ಹೊತ್ತಿಸಿ, ಇದರ ಶಾಖದಲ್ಲಿ ಬಾದಾಮಿಯನ್ನು ಇಕ್ಕಳದ ಸಹಾಯದಿಂದ ಸಂಪೂರ್ಣವಾಗಿ ಸುಡಬೇಕು. ಆನಂತರ, ಇದು ಸುಟ್ಟು ಕರಕಲು ಆದ ಬಳಿಕ, ತಣ್ಣಗಾಗಲು ಬಿಡಬೇಕು. ಆನಂತರ, ಇದನ್ನು ಚೆನ್ನಾಗಿ ನುಣ್ಣಗೆ ಪುಡಿ ಮಾಡಬೇಕು. ಆನಂತರ, ಇದನ್ನು ಜರಡಿ ಮಾಡಿಕೊಂಡು, ಇದಕ್ಕೆ ಸ್ವಲ್ಪ ತುಪ್ಪ ಬೆರೆಸಿ, ಕಲೆಸಿ, ಆನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡರೆ, ಎರಡರಿಂದ ಮೂರು ತಿಂಗಳವರೆಗೆ ಇದನ್ನು ಉಪಯೋಗಿಸಬಹುದು.
ನೈಸರ್ಗಿಕ ಕಾಡಿಗೆಯಲ್ಲಿ ಕರ್ಪೂರ ಮುಖ್ಯ ಅಂಶವಾಗಿದೆ. ಇದು ಕಣ್ಣುಗಳಿಗೆ ತಂಪು ನೀಡುತ್ತದೆ ಮತ್ತು ಕಣ್ಣುಗಳಿಗೆ ಒತ್ತಡದಿಂದ ಮುಕ್ತಿ ನೀಡುತ್ತದೆ. ಅಲ್ಲದೇ ಕಣ್ಣುಗಳ ಆರೋಗ್ಯವು ಉತ್ತೇಜಿಸುತ್ತದೆ.
ಕಾಡಿಗೆ ತಯಾರಿಸಲು ತಾಮ್ರವನ್ನು ಬಳಸಲಾಗುತ್ತದೆ. ಇದರಲ್ಲಿ ಶುದ್ಧೀಕರಿಸುವ ಗುಣವಿದೆ. ತಾಮ್ರವು ಕಣ್ಣನ್ನು ಬಾಹ್ಯ ಮತ್ತು ಮೇಕಪ್ ಸೋಂಕುಗಳಿಂದ ದೂರವಿಡುತ್ತದೆ. ಇದು ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಮತ್ತು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.
ಕಣ್ಣಿನ ಅಂದ ಹೆಚ್ಚಿಸುವ ಕಾಡಿಗೆ ಯನ್ನು ನೈಸರ್ಗಿಕ ವಾಗಿ ತಯಾರಿಸಿ ಬಳಸಿದರೆ ಉತ್ತಮ. ಮಾರುಕಟ್ಟೆ ಯಲ್ಲಿ ದೊರೆಯುವ ಕಾಜಲ್, ಇನ್ನಿತರ ವಸ್ತುಗಳನ್ನು ಕೆಮಿಕಲ್ ಬೆರಕೆ ಯಾಗಿರುವುದರಿಂದ ತೊಂದರೆಗಳು ಕಾಣಿಸಿಕೊಳ್ಳುವ ಸಾದ್ಯತೆ ಹೆಚ್ಚಾಗಿರುತ್ತದೆ.