ಜ್ಞಾನವಾಪಿ ಮಸೀದಿ ಕೇಸ್ ಅರ್ಜಿ ವಿಚಾರಣೆಗೆ ಕೋರ್ಟ್ ‘ಗ್ರೀನ್ ಸಿಗ್ನಲ್’
ಜ್ಞಾನವಾಪಿ (Gyanvapi Masjid Case) ಶೃಂಗಾರ ಗೌರಿ ಪ್ರಕರಣದ ವಿಚಾರಣೆ ನಡೆಸಬಹುದೇ ಅಥವಾ ನಡೆಸಬಾರದೇ ಎಂಬ ವಿಚಾರವಾಗಿ ಇಂದು ನಡೆದ ವಿಚಾರಣೆಯಲ್ಲಿ, ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ಸ್ವೀಕರಿಸಿದೆ.
ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ನಗರದ ಜ್ಞಾನವಾಪಿ ಮಸೀದಿಯೊಳಗೆ ಪೂಜಿಸುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು ದಾಖಲಿಸಿರುವ ಪ್ರಕರಣವನ್ನು ಆಲಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ವಾರಣಾಸಿಯ ಹಿರಿಯ ನ್ಯಾಯಾಧೀಶರ ನ್ಯಾಯಾಲಯವು ಇಂದು ನಿರ್ಧರಿಸಿದ್ದಾರೆ.
ಮತ್ತೊಂದೆಡೆ, ಈ ಪ್ರಕರಣವನ್ನು ವಜಾಗೊಳಿಸಲು ಮುಸ್ಲಿಂ ಕಡೆಯವರು ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಕೋರ್ಟ್ ಪುರಸ್ಕರಿಸಿದೆ.
ಇದೇ ವೇಳೆ ವಾರಾಣಸಿಯಲ್ಲಿ ವಿಚಾರಣೆಗೂ ಮುನ್ನ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಜಿಲ್ಲೆಯ ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎ. ಸತೀಶ್ ಗಣೇಶ್ ಭಾನುವಾರ ಮಾಹಿತಿ ನೀಡಿದ್ದಾರೆ. ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣದ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಸೋಮವಾರ ಪ್ರಕಟಿಸುವ ಕಾರಣ, ಈ ಹಿಂದೆಯೇ ಸೆಕ್ಷನ್ 144 ಜಾರಿಗೊಳಿಸಲು ಸೂಚನೆ ನೀಡಲಾಗಿತ್ತು. ಅಷ್ಟು ಮಾತ್ರವಲ್ಲದೇ, ಧಾರ್ಮಿಕ ಗುರುಗಳೊಂದಿಗೆ ಸಂವಹನ ನಡೆಸಲು ಸಹ ಸೂಚನೆಗಳನ್ನು ನೀಡಲಾಗಿತ್ತು.