ಮಹಿಳಾ ಮೀನುಗಾರರ ಸಾಲ ಮನ್ನಾ ಯೋಜನೆ ದುರುಪಯೋಗ | 1.50 ಕೋಟಿ ವಂಚನೆ

ಮಹಿಳಾ ಮೀನುಗಾರರ ಸಾಲ ಮನ್ನಾ ಯೋಜನೆ ದುರುಪಯೋಗಪಡಿಸಿಕೊಂಡು 1.50 ಕೋ.ರೂ. ವಂಚನೆ ಮಾಡಿರುವುದಾಗಿ ಉಪ್ಪುಂದ ಶ್ರೀ ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ವಿರುದ್ಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮೊತ್ತದ ವಂಚನೆ ಆಗಿರುವುದರಿಂದ ಪ್ರಕರಣದ ತನಿಖೆಯನ್ನು ಉಡುಪಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾಯಿಸಲಾಗಿದೆ.

 

ಮೂಕಾಂಬಿಕಾ ವಿವಿದೋದ್ಧೇಶ ಸಹಕಾರಿ ಸಂಘದ ಉಪಾಧ್ಯಕ್ಷ ರಾಮ ಖಾರ್ವಿ ಅವರು ನೀಡಿದ ದೂರಿನಂತೆ ಸಂಘದ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ರಚಿಸಿಕೊಂಡಿದ್ದು, ಅದರ ಹೆಸರಲ್ಲಿ ಚೇರ್ಮನ್‌ ಬೇಬಿ ಕೊಠಾರಿ, ಕಾರ್ಯದರ್ಶಿ ಹರೀಶ್‌ ಖಾರ್ವಿ, ಖಜಾಂಚಿ ರಾಮದಾಸ ಖಾರ್ವಿ ಅವರು ಯೂನಿಯನ್‌ ಬ್ಯಾಂಕಿನ ಕೊಲ್ಲೂರು ಶಾಖಾ ವ್ಯವಸ್ಥಾಪಕ ರಾಮಕೃಷ್ಣ ದೇವಾಡಿಗರೊಂದಿಗೆ ಒಳ ಒಪ್ಪಂದ ಮಾಡಿಕೊಂಡು, ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಸಾಲ ಮನ್ನಾ ಮಾಡಿಸಿಕೊಂಡು ಹಣ ದುರ್ಬಳಕೆ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಟ್ರಸ್ಟ್‌ ಕೊಲ್ಲೂರು ಯೂನಿಯನ್‌ ಬ್ಯಾಂಕ್‌ನಲ್ಲಿ 100ಕ್ಕೂ ಹೆಚ್ಚು ಮಹಿಳಾ ಮೀನುಗಾರರು ಹೊರತಾಗಿರುವ ಸಂಘಗಳ ಸಾಲವನ್ನು ಮೀನುಗಾರರ ಸಾಲ ಎಂದು ಅರ್ಜಿ ಸಲ್ಲಿಸಿ ಮನ್ನಾ ಮಾಡಿಸಿಕೊಂಡಿದೆ. ಸುಮಾರು 1.50 ಕೋ.ರೂ.ಗೂ ಮಿಕ್ಕಿ ಸಾಲ ಮನ್ನಾ ಆಗಿರುವುದು ಕಂಡುಬಂದಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿಗೆ ಶೇ. 10ಕ್ಕೆ ಸಾಲ ಮಂಜೂರು ಮಾಡಿಸಿ, ತಮ್ಮ ಟ್ರಸ್ಟ್‌ ಸಾಲ ಕೊಟ್ಟ ರೀತಿ ಬಿಂಬಿಸಿ, ಸಾಲ ಮರುಪಾವತಿ ಸಮಯದಲ್ಲಿ ಶೇ. 14 ಬಡ್ಡಿ ದರದಂತೆ ಟ್ರಸ್ಟ್‌ ಹೆಸರಿನ ಪಾಸ್‌ ಪುಸ್ತಕದಲ್ಲಿ ಅಸಲು ಮತ್ತು ಬಡ್ಡಿ ನಮೂದಿಸಿ ಸಾಲ ವಸೂಲಿ ಮಾಡುತ್ತಿದ್ದಾರೆ. ಮಾತ್ರವಲ್ಲದೇ ರಾಷ್ಟ್ರೀಕೃತ ಬ್ಯಾಂಕಿನಿಂದ ತೆಗೆದ ಸಾಲದ ಎಲ್ಲ ವಿವರವನ್ನು ತಮ್ಮಲ್ಲಿ ಇಟ್ಟುಕೊಂಡು ಟ್ರಸ್ಟ್‌ ಹೆಸರಿನ ಪಾಸ್‌ ಪುಸ್ತಕದಲ್ಲಿ ಸಾಲದ ವಿವರ ತಿಳಿಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದೆ.

ಸರಕಾರದಿಂದ ಸಾಲ ಮನ್ನಾ ಆಗಿರುವ ಹಣವು ಸ್ವಸಹಾಯ ಸಂಘಗಳ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ. ಆದರೆ ಇದನ್ನು ಸಂಘದ ಸದಸ್ಯರ ಗಮನಕ್ಕೆ ತರದೆ ಡ್ರಾ ಮಾಡಿರುವುದು ಮತ್ತು ಟ್ರಸ್ಟ್‌ನ ಖಾತೆಗೆ ವರ್ಗಾವಣೆ ಮಾಡಿದ್ದರಿಂದ ವಂಚನೆ ಬೆಳಕಿಗೆ ಬಂದಿದೆ.

Leave A Reply

Your email address will not be published.