ಕಡಬ: ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವರ್ಗಾವಣೆಗೆ ಆಗ್ರಹ-ಪ್ರತಿಭಟನೆಯ ಎಚ್ಚರಿಕೆ!!
ಕಡಬ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರ ವರ್ಗಾವಣೆಗೆ ಈ ಮೊದಲೇ ಆಗ್ರಹ ವ್ಯಕ್ತವಾಗಿದ್ದರೂ ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದ್ದು, ಕೂಡಲೇ ಈ ಬಗ್ಗೆ ಗಮನಹರಿಸಿ ತುರ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ತಾಲೂಕು ದಲಿತ ಮುಖಂಡರು ಎಚ್ಚರಿಸಿದರು.
ಸೆ.09ರಂದು ಕಡಬದ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್ ಅನಂತ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಹಿತರಕ್ಷಣೆ ಮತ್ತು ಭದ್ರತೆಯ ಕುರಿತಾದ ಸಭೆಯಲ್ಲಿ ದಲಿತ ಮುಖಂಡರು ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆಯ ಬಗ್ಗೆ ಆಕ್ರೋಶಗೊಂಡು ಎಚ್ಚರಿಸಿದರು.
ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿದರೂ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಇಲ್ಲಿ ಹಗಲು ಸಿಬ್ಬಂದಿಗಳಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳಿಲ್ಲದೇ ರೋಗಿಗಳು ಪರದಾಡುವಂತಾಗಿದೆ.ಸರ್ಕಾರ ಇಲ್ಲಿಗೆ ಸಿಬ್ಬಂದಿಗಳನ್ನು ನೇಮಿಸುವ ಭರವಸೆ ಮಾತ್ರ ನೀಡಿದ್ದಲ್ಲದೆ, ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಈ ಬಗ್ಗೆ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು,ಕೆಲವೇ ದಿನಗಳಲ್ಲಿ ಸಿಬ್ಬಂದಿಗಳ ನೇಮಕವಾಗಬಹುದು ಎಂದಾಗ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತೀ ಬಾರಿಯೂ ಕೇವಲ ಭರವಸೆ ದೊರೆಯುತ್ತದೆಯೇ ಹೊರತು ಕ್ರಮ ಕೈಗೊಳ್ಳುವ ಯಾವುದೇ ಲಕ್ಷಣ ಕಾಣುವುದಿಲ್ಲ ಎಂದರು.
ಉಳಿದಂತೆ ಸಭೆಯಲ್ಲಿ ಇತರ ವಿಷಯಗಳ ಬಗೆಗೂ ಚರ್ಚೆಯಾಗಿದ್ದು, ಕಾಡಿನ ಉತ್ಪತ್ತಿಯ ಏಲಂ ಪಡೆಯಲು ದಲಿತ ಸಮುದಾಯಕ್ಕೂ ಅವಕಾಶ ನೀಡಬೇಕು ಎನ್ನುವ ಆಗ್ರಹ ವ್ಯಕ್ತವಾಯಿತು. ವಾರದಲ್ಲಿ ಮೂರು ದಿನ ಆಹಾರ ಪರಿವೀಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದು ಮನವಿ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ, ಠಾಣಾಧಿಕಾರಿ ಆಂಜನೇಯ ರೆಡ್ಡಿ, ದಲಿತ ಮುಖಂಡರುಗಳಾದ ರಾಘವ ಕಳಾರ, ವಸಂತ ಕುಬಲಾಡಿ, ಚಂದ್ರಹಾಸ ಬಲ್ಯ, ಗುರುವಪ್ಪ ಕಲ್ಲುಗುಡ್ಡೆ,ಆನಂದ ಕೆ. ಬಾಬು ಮತ್ತಿತರರು ಉಪಸ್ಥಿತರಿದ್ದರು.