ಮಿಸ್ಸಿಂಗ್ ಮಿನಿಸ್ಟರ್ಸ್ ಹುಡುಕಾಟದಲ್ಲಿ ಕಾಂಗ್ರೆಸ್ಸ್ | ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ ಎಂದು ಟ್ವೀಟ್ ಶಾಟ್
ಮಹಾ ಮಳೆಯ ತತ್ತರಕ್ಕೆ ಸಿಲುಕಿದ ಬೆಂಗಳೂರನ್ನು ರಕ್ಷಿಸಬೇಕಾದ ಸಚಿವರು ಕಾಣೆಯಾಗಿದ್ದಾರೆ’ ಎಂದು ಮಿಸ್ಸಿಂಗ್ ಮಿನಿಸ್ಟರ್ಸ್ ಹ್ಯಾಷ್ಟ್ಯಾಗ್ನಡಿ ಬಿಜೆಪಿ ಸಚಿವರು, ಸಂಸದರ ವಿರುದ್ಧ ಸರಣಿ ಪ್ರಾಸಮಯ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಆಕ್ರೋಶ ಹೊರಚೆಲ್ಲಿದೆ. ರಾಜ್ಯದ ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ ಎಂದು ಅದು ವ್ಯಂಗ್ಯವಾಡಿದೆ. ಸಾಲು ಸಾಲು ಟ್ವೀಟ್ ಮಾಡಿ ಸರಣಿ ಸಚಿವರ ಹೆಸರು ಉಲ್ಲೇಖಿಸಿ ಕಾಲೇಳೆದಿದೆ ಕಾಂಗ್ರೆಸ್ಸ್.
ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದರು. ಈಗ ಇಡೀ ಬೆಂಗಳೂರೇ ದೊಡ್ಡ ಸ್ವಿಮ್ಮಿಂಗ್ ಪೂಲ್ ಆಗಿದೆ, ಈಗ ಸಚಿವರು ನಾಪತ್ತೆಯಾಗಿದ್ದಾರೆ. ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ ಕಾಣಿಸುತ್ತಿಲ್ಲ. ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ .
ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ ಆರ್. ಅಶೋಕ್ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ. ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್ಗಳಿಗೆ ಕ್ರಿಯಾಶೀಲರಾಗುತ್ತಾರೆ. ಬೆಂಗಳೂರಿನ ಜನತೆಯ ಮತಬಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ? ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ ‘ನಾನೇ ಸಿಎಂ’ ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ. “ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ” ಎಂದವರೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು ಡಾ. ಅಶ್ವಥ್ನಾರಾಯಣ್ ಅವರೇ ಎಂದು ವಾಗ್ದಾಳಿ ನಡೆಸಿದ್ದಾರೆ.
ನಂತ್ರ ಸಂಸದ ತೇಜಸ್ವಿ ಸೂರ್ಯ ಅವರನ್ನು ತಡವಿ ಕೊಂಡಿದೆ ಕಾಂಗ್ರೆಸ್. ನಿಮ್ಮನ್ನು ಸಂಸದರನ್ನಾಗಿಸಿದ್ದು, ಆಡುವ ಮಕ್ಕಳನ್ನು ಶಾಲೆಗೆ ಸೇರಿಸಿದಂತಾಗಿದೆ. ಹಿಂದೆ ಕೋವಿಡ್ ಕಾಲದಲ್ಲಿ ಫುಟ್ಬಾಲ್ ಆಡಲು ಹೋಗಿದ್ದೀರಿ, ಮಹಾ ಮಳೆಯ ಕಾಲದಲ್ಲಿ ದೋಸೆಗೆ ಬೆಣ್ಣೆ ಸವರಿ ತಿನ್ನಲು ಹೋಗಿದ್ದೀರಿ. ಕೆಲಸಕ್ಕೆ ಕರೆಯಬೇಡಿ, ದೋಸೆ ತಿನ್ನೋಕೆ ಕರೆಯೋದು ಮರೆಯಬೇಡಿ ಎಂಬುದು ಇವರ ಮನವಿ ಎಂದು ಸೂರ್ಯನ ಕಾಲು ಹಿಡಿದು ಎಳೆಯಲಾಗಿದೆ.
ಬೆಂಗಳೂರನ್ನು ಪ್ರತಿನಿಧಿಸುವ ಮತ್ತೊಬ್ಬ ಸಚಿವ ಎಸ್.ಟಿ. ಸೋಮಶೇಖರ್ ಮಳೆ ಅವಾಂತರದಿಂದ ನಲುಗಿದ ಯಾವುದೇ ಏರಿಯಾಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಜನತೆ ಹುಡುಕುತ್ತಿದ್ದಾರೆ. ಬೆಂಗಳೂರಲ್ಲೇ ಬೆಳೆದು, ಬೆಂಗಳೂರಲ್ಲೇ ಅಧಿಕಾರ, ಆಸ್ತಿ, ಅಂತಸ್ತು ಕಂಡುಕೊಂಡ ಸಚಿವ ವಿ. ಸೋಮಣ್ಣ ಅವರು ಬೆಂಗಳೂರನ್ನೇ ಕಡೆಗಣಿಸಿದರೆ ಹೇಗೆ? ಬೆಂಗಳೂರು ಉಸ್ತುವಾರಿಗಾಗಿ ಹಂಬಲಿಸುವ ಇವರ ಮನ ಜನರ ಕಷ್ಟಕ್ಕೆ ಮಿಡಿಯದಿರುವುದೇಕೆ? ಜನರಿಗೆ ಕಷ್ಟ ಬಂದಾಗ ಬಿಜೆಪಿಗರಿಗೆ ವಿಶ್ರಾಂತಿಯ ಸಮಯವೇ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನ ಸಚಿವರಾದ ಗೋಪಾಲಯ್ಯ ಇದುವರೆಗೂ ಯಾವುದೇ ನೆರೆ ಸಂತ್ರಸ್ತ ಜನರ ಬಳಿ ಹೋಗಿದ್ದು ಎಲ್ಲೂ ಕಾಣಲಿಲ್ಲ. ಪರಿಹಾರ ಕಾರ್ಯಗಳನ್ನು ನಡೆಸಬೇಕಾದವರು ನಾಪತ್ತೆಯಾಗಿದ್ದೆಲ್ಲಿ? ಸಿಎಂ ಬೊಮ್ಮಾಯಿ ಅವರು ಸಚಿವರೆಲ್ಲರನ್ನೂ ‘ಮಳೆಯಲಿ, ಚಳಿಯಲ್ಲಿ, ಬೆಚ್ಚಗೆ ಮಲಗಲಿ’ ಎಂಬಂತೆ ಬಿಟ್ಟಿದ್ದಾರೆಯೇ ಎಂದು ಕಾಂಗ್ರೆಸ್ ಕಿಡಿ ಕಾರಿದೆ.