ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ, ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜ್ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ
ಬೆಂಗಳೂರು: ಹುಕ್ಕೇರಿ ಶಾಸಕ, ಸಚಿವ ಉಮೇಶ್ ಕತ್ತಿ (61) ಅವರು ನಿನ್ನೆ ರಾತ್ರಿ ಅಕಾಲಿಕವಾಗಿ ವಿಧಿವಶರಾಗಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದಾಗ ರಾತ್ರಿ ಸುಮಾರು 10 ಗಂಟೆಗೆ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಉಮೇಶ್ ಕತ್ತಿ ಅವರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಉಮೇಶ್ ಕತ್ತಿ ನಿಧನರಾದ ವಿಷಯ ತಿಳಿಯುತ್ತಿದ್ದಂತೆ ಸಿಎಂ ಬೊಮ್ಮಾಯಿ ಸಹಿತ ಹಲವು ಸಚಿವರು ಮತ್ತು ಶಾಸಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ನಿನ್ನೆ ಅವರು ತಮ್ಮ ಡಾಲರ್ಸ್ ಕಾಲನಿಯ ನಿವಾಸದಲ್ಲಿದ್ದಾಗ ಬಾತ್ ರೂಮಿಗೆ ಹೋಗಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದರು. ಅದನ್ನು ಯಾರೂ ಗಮನಿಸಿರಲಿಲ್ಲ. ಆದರೆ ಹತ್ತು ನಿಮಿಷವಾದರೂ ಹೊರಗೆ ಬಾರದೇ ಇದ್ದುದರಿಂದ ಆತಂಕಗೊಂಡು ಕುಟುಂಬಸ್ತರು ಬಾಗಿಲು ಬಡಿದು ನೋಡಿದಾಗ ಪ್ರಜ್ಞೆ ಹೀನ ಸ್ಥಿತಿಯಲ್ಲಿ ಇದ್ದರು ಎನ್ನಲಾಗಿದೆ.
ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ನಾಲ್ಕೈದು ಬಾರಿ ಹೃದಯ ತಪಾಸಣೆ ನಡೆಸಿದರೂ ಯಾವುದೇ ಫಲ ನೀಡಿಲ್ಲ ಎಂದು ರಾಮಯ್ಯ ಆಸ್ಪತ್ರೆ ಮೂಲಗಳು ತಿಳಿಸಿವೆ.
ಕತ್ತಿಯವರ ಮರಣದ ಪ್ರಯುಕ್ತ ಬೆಳಗಾವಿ ಜಿಲ್ಲೆಯಾದ್ಯಂತ ಇಂದು ಶಾಲಾ ಕಾಲೇಜ್ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಉಮೇಶ್ ಕತ್ತಿ ಅವ್ರು ಒಟ್ಟು 9 ಬಾರಿ ಚುನಾವಣೆಗೆ ಸ್ಪರ್ಧಿಸಿ, ಬರೋಬರಿ 8 ಬಾರಿ ಗೆಲುವು ಕಂಡಿದ್ದರು. ಕೇವಲ ಒಂದು ಬಾರಿ ಮಾತ್ರ 800 ಮತಗಳ ಅಂತರದಲ್ಲಿ ಒಂದು ಬಾರಿ ಸೋತಿದ್ದರು. ಅಷ್ಟರ ಮಟ್ಟಿಗೆ ತಮ್ಮ ಕ್ಷೇತ್ರದಲ್ಲಿ ಅವರು ಬಿಗಿ ಹಿಡಿತವನ್ನು ಸಾಧಿಸಿದ್ದರು.
ಕತ್ತಿಯವರು ತನ್ನ ಕಡಕ್ ಮಾತಿಗೆ ಹೆಸರುವಾಸಿ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆ, ನಾನು ಸಹ ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿಕೆಗಳನ್ನು ಇತ್ತೀಚೆಗೆ ಅವರು ನೀಡಿದ್ದು ಅದು ತೀರಾ ಟೀಕೆಗೆ ಗುರಿಯಾಗಿತ್ತು.
1961 ಮಾರ್ಚ್ 14ರಂದು ಬೆಳಗಾವಿ ಜಿಲ್ಲೆಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು ಉಮೇಶ್ ಕತ್ತಿ. ಕೃಷಿಕನಾಗಿ, ನಂತರ ರಾಜಕೀಯವಾಗಿ ಮತ್ತು ಉದ್ಯಮಿ ಆಗಿಯೂ ಅವರು ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಪಡೆದಿದ್ದರು.1996 ರಲ್ಲಿ ಮೊದಲ ಬಾರಿಗೆ ಸಚಿವ ಅಲಂಕರಿಸಿದ ಕತ್ತಿ ಅಂದು ಮೊದಲಿಗೆ ಸಕ್ಕರೆ ಸಚಿವ ಖಾತೆಯ ಹೊಣೆ ಹೊತ್ತಿದ್ದರು. ಒಟ್ಟು 6 ಬಾರಿ ಪಕ್ಷಾಂತರ ಮಾಡಿದ್ದ ಅವರು, ನಂತರ ಹಲವು ಹುದ್ದೆಗಳನ್ನು ಅಲಂಕರಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನಾನೇ ಮೊದಲ ಸಿಎಂ ಆಗುತ್ತೇನೆ ಎಂದು ಹೇಳಿದ್ದರು. ನನಗೆ ಇನ್ನೂ ಟೈಮ್ ಇದೆ, ನಾನು ಮುಂದೊಂದು ದಿನ ಈ ರಾಜ್ಯದ ಸಿಎಂ ಆಗಿಯೇ ಆಗುತ್ತೇನೆಂದು ಉಮೇಶ್ ಕತ್ತಿ ಕನಸು ಕಂಡಿದ್ದರು. ಇರುವ 224 ಶಾಸಕರಲ್ಲಿ ನಾನೇ ಹಿರಿಯವನು. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳು ಇವೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ ಎಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ ವಿಧಿ ಬೇರೆಯದೇ ಆತ ಆಡಿದೆ. ಕತ್ತಿಯವರು ಇನ್ನಿಲ್ಲ.