ತಮ್ಮ ವಿರುದ್ಧ ಸುದ್ದಿ ಪ್ರಕಟಿಸಬಾರದೆಂದು ತಡೆಯಾಜ್ಞೆ ತಂದ ಮುರುಘಾ ಶರಣರು !!!
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸೆಪ್ಟೆಂಬರ್ 1 ರಂದು ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ತಮ್ಮ ಕುರಿತು ಸುದ್ದಿಗಳನ್ನು ಪ್ರಕಟಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಯನ್ನು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಗುರುವಾರ ರಾತ್ರಿ ಆದೇಶ ನೀಡಿದ್ದರು.
ಮುರುಘಾ ಶರಣರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಹೆಚ್ಚುವರಿ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶೆ ಹಾಗೂ ಮ್ಯಾಜಿಸ್ಟ್ರೇಟ್ ಕೋಮಲಾ ಅವರ ಮುಂದೆ ಹಾಜರುಪಡಿಸಿದ್ದರು. ಶ್ರೀಗಳ ಪರ ವಕೀಲರು ಮ್ಯಾಜಿಸ್ಟ್ರೇಟ್ ಎದುರು ಜಾಮೀನು ಅರ್ಜಿ ಸಲ್ಲಿಸಿದರೂ ಕೂಡ ವಿಚಾರಣೆಯ ಅಗತ್ಯವಿದುದ್ದರಿಂದ ಜಾಮೀನು ತಿರಸ್ಕೃತಗೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಪೊಲೀಸರು ವಾಹನದಲ್ಲಿ ಭಾನುವಾರ ಶ್ರೀಗಳನ್ನು ಮಠಕ್ಕೆ ಕರೆದೊಯ್ದ ತನಿಖಾ ತಂಡ, ಅವರು ತಂಗುತಿದ್ದ ಕೊಠಡಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಪರಿಶೀಲಿಸಿದೆ. ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿ ತಂಗುತ್ತಿದ್ದ ಕೊಠಡಿಯಲ್ಲಿ ದೋಷಾರೋಪಕ್ಕೆ ಪೂರಕವಾಗಿ ಲಭ್ಯವಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಸಿ.ಆರ್ ಪಿ.ಸಿ ಸೆಕ್ಷನ್ 164, ರ ಅಡಿಯಲ್ಲಿ ಸಂತ್ರಸ್ತ ಬಾಲಕಿಯರು ನ್ಯಾಯಾಲಯದಲ್ಲಿ ದಾಖಲಿಸಿದ ಹೇಳಿಕೆಯ ಪ್ರತಿಯು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳ ಕೈ ಸೇರಿವೆ.
ಈ ನಡುವೆ , ಅತ್ಯಾಚಾರದ ಆರೋಪದ ಮೇಲೆ ಫೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ತಮ್ಮ ವಿರುದ್ಧ ಸುದ್ದಿ ಪ್ರಕಟಣೆಯಾಗದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ತಂದಿದ್ದಾರೆ.
ಈಗ ಲೈಂಗಿಕ ಆರೋಪದ ಮೇಲೆ ಮುರುಘಾ ಶ್ರೀಗಳನ್ನು ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹೀಗಾಗಿ ಶ್ರೀಗಳನ್ನು ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನೂ ಇವರ ಜಾಮೀನು ಅರ್ಜಿ ವಿಚಾರಣೆ ಸೆ.7ಕ್ಕೆ ನಿಗದಿಯಾಗಿದೆ.