ಮಠಗಳಲ್ಲಿ ಲೈಂಗಿಕ ಹಗರಣದ ಆಡಿಯೋ ವೈರಲ್ ಆದ ಬೆನ್ನಲ್ಲೇ ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ ; ಅಷ್ಟಕ್ಕೂ ಆ ಆಡಿಯೋದಲ್ಲಿ ಇದ್ದಿದ್ದೇನು?

ಮುರುಘಾ ಮಠದ ಸ್ವಾಮೀಜಿಗಳ ಲೈಂಗಿಕ ಹಗರಣ ಪ್ರಕರಣ ರಾಜ್ಯಕ್ಕೆ ರಾಜ್ಯವೇ ಸುದ್ದಿಯಲ್ಲಿದೆ. ಇದರ ನಡುವೆಯೇ ಮಹಿಳೆಯರಿಬ್ಬರು ಮಾತನಾಡುವ ಆಡಿಯೋ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೇ ಬೆಳಗಾವಿಯ ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಮಠದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ವೈರಲ್ ಆದ ಆಡಿಯೊದಲ್ಲಿ ಅವರ ಹೆಸರು ಉಲ್ಲೇಖವಾಗಿತ್ತು. ಇದರಿಂದ ಶ್ರೀಗಳು ನೊಂದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ.

ಮುರಘಾ ಶ್ರೀಗಳ ಲೈಂಗಿಕ ಪ್ರಕರಣ ಕುರಿತು ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದ್ದು, ಕೆಲವು ಸ್ವಾಮೀಜಿಗಳ ಲೈಂಗಿಕ ಹಗರಣದ ಕುರಿತು ಓರ್ವ ಮಹಿಳೆ ಆಡಿಯೊದಲ್ಲಿ ಹೆಸರು ಸಹಿತ ಪ್ರಸ್ತಾಪ ಮಾಡಿದ್ದಾರೆ. ಆಡಿಯೊದಲ್ಲಿ ಇಬ್ಬರು ಮಹಿಳೆಯರು ಮಾತನಾಡಿದ್ದಾರೆ. ಅವರ ಪೈಕಿ ಓರ್ವ ಮಹಿಳೆ ಕೆಲವೊಂದು ಪ್ರಶ್ನೆಗಳನ್ನು ಇನ್ನೊಂದು ಮಹಿಳೆಗೆ ಕೇಳಿದ್ದಾರೆ. ಬೆಳಗಾವಿಯ ಮಠದಲ್ಲಿಯೇ ಅನೇಕ ವರ್ಷಗಳಿಂದ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಇನ್ನೊಂದು ಮಹಿಳೆ ಮಠಗಳಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯಗಳ ಕುರಿತು ವಿವರಣೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆಲವೊಂದು ಮಠಗಳು ಹಾಗೂ ಕೆಲವು ಸ್ವಾಮೀಜಿಗಳ ಹೆಸರನ್ನೂ ಆಕೆ ಆಡಿಯೋದಲ್ಲಿ ಹೇಳಿದ್ದಾರೆ. ಆ ಆಡಿಯೊದಲ್ಲಿ ನೇಗಿನಹಾಳ ಸ್ವಾಮೀಜಿ ಹೆಸರು ಕೂಡ ಇದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಮನನೊಂದುಕೊಂಡು ಇಂಥದ್ದೊಂದು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನೇಣಿಗೆ ಶರಣಾಗಿರುವ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಡೆತ್​ನೋಟ್ ಬರೆದಿಟ್ಟಿದ್ದಾರೆ. ಸಲ್ಲದ ಮಾತುಗಳನ್ನು ಆಡಿರುವ ಸತ್ಯಕ್ಕ, ರುದ್ರಮ್ಮ ಎಂಬುವವರ ವಿರುದ್ಧ ಕಾನೂನು ಕ್ರಮಕ್ಕೆ ಸ್ವಾಮೀಜಿ ಒತ್ತಾಯಿಸಿದ್ದಾರೆ. ಸಮಾಜ ಬೀದಿಗಿಳಿದು ಹೋರಾಟ ಮಾಡುವ ಇವರು ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶ್ರೀಗಳನ್ನು ಗುರಿಯಾಗಿಸಿಕೊಂಡು ಇಲ್ಲದ ಸಲ್ಲದ ಆರೋಪ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಮಠಾಧೀಶರಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೈರಲ್​ ಆಡಿಯೋ ಕುರಿತು ಸೂಕ್ತ ತನಿಖೆ ನಡೆಸುವಂತೆ, ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ಡಿವೈಎಸ್​ಪಿ ಅವರಿಗೆ ಮಠದ ಆಡಳಿತ ಮಂಡಳಿ ದೂರು ನೀಡಿದೆ. ಲಿಂಗಾಯತ ಧರ್ಮದ ಮಠಾಧೀಶರನ್ನ ಗುರಿಯಾಗಿಸಿಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಮಠಾಧೀಶರ ಚಾರಿತ್ರ್ಯಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಲಿಂಗಾಯತ ಧರ್ಮದವರಿಗೆ ಮುಜುಗರ ಮಾಡಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.