50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಮತ್ತೆ-ಮತ್ತೆ ಹಣಕ್ಕಾಗಿ ಪತ್ನಿಗೆ ಹಿಂಸೆ ; ಎರಡು ತಿಂಗಳಲ್ಲೇ ಮನೆ ತೊರೆದ ವೈದ್ಯೆ – ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ!
ವರದಕ್ಷಿಣೆ ಎಂಬ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ ಎಂಬುದೇ ಆಶ್ಚರ್ಯಕರ. ಈ ಒಂದು ಅಸ್ತ್ರವನ್ನು ಇಟ್ಟುಕೊಂಡು ಹೆಂಡತಿಯರ ಪಾಲಿಗೆ ನರಕವನ್ನೇ ತೋರಿಸುತ್ತಾರೆ ಗಂಡಂದಿರು. ಅದೆಷ್ಟೇ ವರದಕ್ಷಿಣೆ ಕೊಟ್ಟರು ಸಮಾಧಾನಗೊಳ್ಳದ ಗಂಡಸರು ಚಿತ್ರಹಿಂಸೆಯನ್ನು ನೀಡುತ್ತಾರೆ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಅದೇ ರೀತಿ ಇದೀಗ ಜಿಲ್ಲೆಯಲ್ಲಿ ಮತ್ತೊಂದು ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಹೌದು. ಹೈದ್ರಾಬಾದ್ ಮೂಲದ ವೈದ್ಯೆಯನ್ನು ಮದುವೆಯಾಗಿ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೋಡುತ್ತಿದ್ದ ವ್ಯಕ್ತಿ, ಆಕೆಯಿಂದ ವಿಚ್ಛೇದನ ಪಡೆಯುವ ಮೊದಲೇ ಮತ್ತೊಂದು ವಿವಾಹವಾಗಿ ಮಹಿಳೆಗೆ ವಂಚಿಸಿದ್ದಾನೆ.
ಬಳ್ಳಾರಿ ಮೂಲದ ರಘುರಾಮ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಹೈದರಾಬಾದ್ ಮೂಲದ ಡಾಕ್ಟರ್ ಮೌನಿಕಾರಿಗೆ ಅವರನ್ನು 2019ರಲ್ಲಿ ಮದುವೆಯಾಗಿದ್ದನು. ಮದುವೆ ವೇಳೆ ಐವತ್ತು ಲಕ್ಷ ರೂಪಾಯಿ ವರದಕ್ಷಿಣೆ, ಒಂದು ಕೆ.ಜಿ. ಬಂಗಾರವನ್ನು ನೀಡಲಾಗಿತ್ತು. ಆದರೆ ಇಷ್ಟು ಸಾಲದೇ ಇನ್ನು ಕೂಡ ಹಣಕ್ಕಾಗಿ ಹೆಂಡತಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು.
ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ರೆಡ್ಡಿ, ಹಣಕ್ಕಾಗಿ ಪೀಡಿಸುತ್ತಿದ್ದ. ಅಸಲಿ ಏನಪ್ಪಾ ಅಂದ್ರೆ, ಆಸ್ಟ್ರೆಲಿಯಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ರಘುರಾಮ ರೆಡ್ಡಿಗೆ ನಿಜವಾಗಿಯೂ ಯಾವುದೇ ಕೆಲಸವಿಲ್ಲರಲಿಲ್ಲ. ಹೀಗಾಗಿ ನಿತ್ಯ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದನು. ಹೀಗಾಗಿ, ಗಂಡನ ಕಾಟ ತಾಳಲಾರದೆ, ಮನೆಯಿಂದ ವೈದ್ಯೆ ಹೊರ ಬಂದಿದ್ದರು.
ಆದರೆ ಇದೀಗ ಪತ್ನಿಯಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾಗಿದ್ದಾನೆ. ಈ ವೇಳೆ ಇದರ ಬಗ್ಗೆ ಪ್ರಶ್ನಿಸಲು ಬಂದ ಮೊದಲ ಹೆಂಡತಿ, ಮತ್ತವರ ಮನೆಯವರ ಮೇಲೆ ಮಾರಾಕಾಸ್ತ್ರಗಳಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮೊದಲ ಪತ್ನಿಯ ದೂರಿನ ಮೇರೆಗೆ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ, ಸಹೋದರ ಹರೀಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಈ ಮೂವರು ಸೇರಿದಂತೆ ಕುಟುಂಬ ಏಳು ಜನರ ಮೇಲೆ ದೂರು ದಾಖಲಾಗಿದೆ. ಆದರೆ, ಇನ್ನು ಉಳಿದವರು ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.