ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ-2022!! ದ.ಕ-ಉಡುಪಿ ಜಿಲ್ಲೆಯ ಮೂವರು ಆಯ್ಕೆ!!
ಮಂಗಳೂರು:ರಾಜ್ಯ ಸರ್ಕಾರ ನೀಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ-2022 ಗೆ ದಕ್ಷಿಣ ಕನ್ನಡ ಸಹಿತ ಉಡುಪಿ ಜಿಲ್ಲೆಯ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮಿತಾನಂದ ಹೆಗ್ಡೆ, ರಾಧಾಕೃಷ್ಣ ಟಿ. ಹಾಗೂ ಕಾರ್ಕಳದ ಮಿಯ್ಯಾರಿನ ಸಂಜೀವ ದೇವಾಡಿಗ ಪ್ರಶಸ್ತಿಗೆ ಭಾಜರಾಗಲಿದ್ದಾರೆ.
ಅಮಿತಾನಂದ ಹೆಗ್ಡೆಯವರು ಬಂಗಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದು, ಉಜಿರೆಯ ಪಿಲಿಕುಂಜೆ ನಿವಾಸಿಯಾಗಿದ್ದಾರೆ. ಉಪ್ಪಿನಂಗಡಿ, ಉಜಿರೆ, ಬೆಳ್ತಂಗಡಿ ಮುಂತಾದೆಡೆ ಕರ್ತವ್ಯ ನಿರ್ವಹಿಸಿದ್ದಾರೆ.2021ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡ ಇವರು ಈ ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಧಾಕೃಷ್ಣ ಟಿ. ಇವರು ಕೊಯ್ಯೂರು ಸರಕಾರಿ ಪ್ರೌಢ ಶಾಲಾ ವಿಜ್ಞಾನ ಶಿಕ್ಷರಾಗಿದ್ದು, ಬಂಟ್ವಾಳ ತಾಲೂಕಿನ ಪೆರುವಾಯಿ ನಿವಾಸಿಯಾಗಿರುವ ಇವರು ಪ್ರಸ್ತುತ ಬೆಳ್ತಂಗಡಿ ಕುತ್ಯಾರು ಬಳಿ ವಾಸವಿದ್ದಾರೆ.ಕಳೆದ 24 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ರಾಷ್ಟೀಯ ಸೇವಾ ಯೋಜನೆಯ ಅನುಷ್ಠಾನ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಜೀವ ದೇವಾಡಿಗ ಇವರು ಕಳೆದ 29 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದು, ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಆ ಭಾಗದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ್ದಾರೆ.2017-18ರ ಗ್ರಾಮೀಣ ಸೇವಾ ದಳದ ಅತ್ಯುತ್ತಮ ಶಾಂತ ನಾಯಕ ಪ್ರಶಸ್ತಿಗೆ ಭಾಜನಾರಿದ್ದ ಇವರು ಕಳೆದ ನಾಲ್ಕು ತಿಂಗಳುಗಳ ಹಿಂದಷ್ಟೇ ಮಿಯಾರಿಗೆ ವರ್ಗಾವಣೆಗೊಂಡಿದ್ದರು.