ಮಗನಿಲ್ಲದ ಚಿಂತೆಯಿಂದ ಮೂವರು ಹೆಣ್ಣು ಮಕ್ಕಳನ್ನು ಕತ್ತು ಹಿಸುಕಿ ಕೊಂದ ತಾಯಿ; ಆಕೆಯ ನಿರ್ಧಾರದ ಹಿಂದಿತ್ತೇ ಸಹಿಸಲಾಗದ ನೋವು?

ಹೆಣ್ಣು ಗಂಡು ಎನ್ನುವ ತಿರಸ್ಕಾರ ಭಾವನೆ ಇಂದಿಗೂ ಜೀವಂತವಾಗಿದೆ ಎಂದರೆ ನಂಬಲು ಅಸಾಧ್ಯ. ಆದರೆ, ನಂಬಲೇ ಬೇಕಾಗಿದೆ. ಇಲ್ಲೊಬ್ಬಾಕೆ ಮಹಾತಾಯಿ ತನಿಗೆ ಗಂಡು ಮಕ್ಕಳಿಲ್ಲ ಮೂವರು ಹೆಣ್ಣು ಮಕ್ಕಳೇ ಇದ್ದಾರೆ ಎಂದು ಆಕೆ ಮಾಡಿದ ಕೃತ್ಯ ಎಂತದ್ದು ಗೊತ್ತಾ?.. ಅಯ್ಯೋ ಅನಿಸುವಂತಿದೆ ಈ ಘಟನೆ.

 

ಹೌದು. ಗಂಡು ಮಗುವಿಲ್ಲದ ಕಾರಣಕ್ಕೆ ಮೂವರು ಹೆಣ್ಣು ಮಕ್ಕಳನ್ನು ಸ್ವತಃ ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಆಘಾತಕಾರಿ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಆಕೆಯ ನಿರ್ಧಾರದ ಹಿಂದೆ ಕುಟುಂಬಸ್ಥರ ನಿಂದನೆಯೇ ಕಾರಣವಾಗಿತ್ತೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಆರೋಪಿ ತಾಯಿಯನ್ನು ಪಿಂಕಿ ದೇವಿ ಎಂದು ಗುರುತಿಸಲಾಗಿದೆ. ಪೂನಂ ಕುಮಾರಿ (10), ರೂನಿ ಕುಮಾರಿ (8) ಮತ್ತು ಬಾಬ್ಲಿ ಕುಮಾರಿ (3) ಎಂಬ ಮಕ್ಕಳೇ ತಾಯಿಯಿಂದ ಕೊಲೆಯಾದ ನತದೃಷ್ಟರು.

ಇಲ್ಲಿನ ಗಾಯಘಾಟ್ ನಿವಾಸಿ ಸುನೀಲ್ ಯಾದವ್ ಎಂಬುವವರ ಪತ್ನಿಯಾದ ಪಿಂಕಿ ದೇವಿಗೆ ಗಂಡು ಮಕ್ಕಳು ಆಗಿರಲಿಲ್ಲ. ಇದರಿಂದ ಆಕೆ ಚಿಂತೆ ಮತ್ತು ಬೇಸರಕ್ಕೂ ಒಳಗಾಗಿದ್ದರು. ಅಲ್ಲದೇ, ಅದೇ ಕಾರಣಕ್ಕಾಗಿ ಗಂಡನ ಮನೆಯವರು ಕೂಡ ಪಿಂಕಿ ದೇವಿಯನ್ನು ನಿಂದಿಸುತ್ತಿದ್ದರು. ಹೀಗಾಗಿಯೇ ತನ್ನ ಮೂವರು ಹೆಣ್ಣು ಮಕ್ಕಳ ಪ್ರಾಣವನ್ನೇ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾತ್ರಿ ಊಟ ಮಾಡಿ ನಂತರ ಮೂವರು ಮಕ್ಕಳನ್ನು ಪಿಂಕಿದೇವಿ ಜೊತೆಯಲ್ಲಿ ಕರೆದುಕೊಂಡು ಮಲಗಿದ್ದರು. ಬೆಳಗ್ಗೆ ಚಾಯ್​ ಕುಡಿಯಲು ಕರೆದರೂ ಹುಡುಗಿಯರು ಬರಲಿಲ್ಲ. ಆದ್ದರಿಂದ ನಾನೇ ಹೋಗಿ ನೋಡಿದಾಗ ಮೂವರು ಮಕ್ಕಳು ಶವವಾಗಿ ಬಿದ್ದಿದ್ದರು. ಮೃತ ಬಾಲಕಿಯರ ದೇಹ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ವಿಷ ಹಾಕಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಪಿಂಕಿಯ ಅತ್ತೆ ಹೀರಾಮುನಿ ದೇವಿ ತಿಳಿಸಿದ್ದಾರೆ.

ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್​ಪಿ ಶ್ರೀರಾಜ್, ಮಗನಿಲ್ಲದ ಚಿಂತೆಯಿಂದ ಹೆಣ್ಣು ಮಕ್ಕಳನ್ನು ತಾನೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಾಯಿ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.