ಹಲ್ಲನ್ನು ಸ್ವಚ್ಛ ಮಾಡುವುದರ ಜೊತೆಗೆ ನಾಲಿಗೆಯ ಸ್ವಚ್ಛತೆಯು ಮುಖ್ಯ
ಪ್ರತಿದಿನ ಹಲ್ಲಿನ ಜೊತೆಗೆ ನಾಲಿಗೆಯ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ನಾಲಿಗೆಯನ್ನು ಸ್ವಚ್ಛಗೊಳಿಸುವುದು ಬಾಯಿಯ ನೈರ್ಮಲ್ಯ ಅಥವಾ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಒಂದು ವಿಧಾನವಾಗಿದ್ದು, ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ .
ಇದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಏಕೆಂದರೆ ದೀರ್ಘಕಾಲದವರೆಗೆ ಹಲ್ಲಿನ ನೈರ್ಮಲ್ಯವನ್ನು ನಿರ್ಲಕ್ಷಿಸುವುದು ಅಂತಿಮವಾಗಿ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಪ್ರತಿ ದಿನದ ಮುಂಜಾನೆ ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ದಿನದ ಆರಂಭವು ಉತ್ತಮ ಭಾವನೆಯಿಂದ ಪ್ರಾರಂಭವಾಗುತ್ತದೆ.
ಬಾಯಿಯ ಆರೋಗ್ಯವನ್ನು ಹೆಚ್ಚಾಗಿ ಲಘುವಾಗಿ ಪರಿಗಣಿಸಲಾಗುತ್ತದೆ. ಆದರೆ ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವ ಅಭ್ಯಾಸವು ಅತ್ಯಗತ್ಯ.
ನಮ್ಮ ಬಾಯಿಯ ಮೂಲಕವೇ ಆಹಾರ ನಮ್ಮ ಹೊಟ್ಟೆ ಸೇರುತ್ತದೆ. ಪೋಷಕಾಂಶ ಭರಿತ ಆಹಾರಗಳ ಜೊತೆಗೆ ನಮ್ಮ ಬಾಯಿಯ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ಬಹುತೇಕ ಜನರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ. ಆದರೆ ನಾಲಿಗೆಯ ಸ್ವಚ್ಛತೆಯ ಬಗ್ಗೆ ಗಮನ ನೀಡುವುದಿಲ್ಲ.
ತಜ್ಞರು ಹೇಳುವ ಪ್ರಕಾರ ನಾಲಿಗೆಯ ಸ್ವಚ್ಛತೆಯ ಬಗ್ಗೆ ಗಮನ ನೀಡದೆ ಇದ್ದಾಗ ಕೆಟ್ಟ ಬ್ಯಾಕ್ಟೀರಿಯಾಗಳು ನಾಲಿಗೆಯಲ್ಲಿ ಉಳಿದುಕೊಳ್ಳುತ್ತವೆ. ಅವು ಬಾಯಿ ವಾಸನೆ, ಬಾಯಿಗೆ ಸಂಬಂಧಿಸಿದ ಕಾಯಿಲೆ, ಮತ್ತು ಕೆಟ್ಟ ಉಸಿರಿನಂತಹ ಸಮಸ್ಯೆಗಳು ಹೆಚ್ಚುವುದು.
ದಿನಕ್ಕೆ ಎರಡು ಬಾರಿ ನಾಲಿಗೆಯನ್ನು ಸ್ವಚ್ಛಗೊಳಿಸಿದರೆ ನಾಲಿಗೆಯ ಸಂವೇದನೆಯ ಶಕ್ತಿ ಹೆಚ್ಚುವುದು. ನಾಲಿಗೆಯ ಸ್ವಚ್ಛತೆಯಿಂದ ಸತ್ತ ಜೀವಕೋಶಗಳು ಮತ್ತು ಅನಗತ್ಯವಾದ ವಸ್ತುಗಳನ್ನು ಸ್ವಚ್ಛವಾಗುತ್ತವೆ. ಆಗ ನಾಲಿಗೆಯ ಮೇಲೆ ಇರುವ ರುಚಿಯ ಗುಳ್ಳೆಗಳು ಆರೋಗ್ಯವಾಗಿರುತ್ತವೆ. ಸಿಹಿ, ಹುಳಿ, ಕಹಿಯಂತಹ ರುಚಿಯ ಸಂವೇದನೆಯನ್ನು ಸ್ಪಷ್ಟಗೊಳಿಸುವುದು
ಪ್ರತಿದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ರಾತ್ರಿ ವೇಳೆಯಲ್ಲಿ ಬಾಯಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರ ಹಾಕಲು ಸಹಾಯವಾಗುವುದು. ನಾಲಿಗೆಯ ಸ್ವಚ್ಛತೆಯಿಂದ ಆಂತರಿಕ ಅಂಗಗಳು ನಿಧಾನವಾಗಿ ಸಕ್ರಿಯಗೊಳ್ಳುತ್ತವೆ. ಜೊತೆಗೆ ಜಾಗೃತವಾಗಿ ಕೆಲಸ ನಿರ್ವಹಿಸುತ್ತವೆ.
ಕಳಪೆ ಬಾಯಿಯ ನೈರ್ಮಲ್ಯವು ಹಲ್ಲು ಹುಳುಕಾಗುವುದು, ಹಲ್ಲಿನ ಸವೆತ ಮತ್ತು ಒಸಡುಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಕಳಪೆ ಬಾಯಿಯ ನೈರ್ಮಲ್ಯವು ರಕ್ತದಲ್ಲಿನ ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎಂದು ಸೂಚಿಸಿದೆ.
ನಾಲಿಗೆಯನ್ನು ಸ್ವಚ್ಛಗೊಳಿಸದಿರುವುದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಹಲವರಿಗೆ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿದಿಲ್ಲ.
ನಾಲಿಗೆಯನ್ನು ಸ್ವಚ್ಛಗೊಳಿಸುವ ಕೆಲವು ಸಲಹೆಗಳು ಇಲ್ಲಿವೆ.
ಮನೆಯ ಅಡುಗೆಮನೆಯಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುವ ಉಪ್ಪು, ನಾಲಿಗೆಯನ್ನು ಸ್ವಚ್ಛಗೊಳಿಸಲು ಉಪಯುಕ್ತವಾಗಿದೆ. ಉಪ್ಪಿನಿಂದ ನಾಲಿಗೆಯನ್ನು ಸ್ವಚ್ಛಗೊಳಿಸಿ, ರಾತ್ರಿ ಮಲಗುವ ಮೊದಲು ಉಪ್ಪು ನೀರಿನಿಂದ ಗಾರ್ಗ್ ಮಾಡುವುದರ ಜೊತೆಗೆ ನಾಲಿಗೆಗೆ ಉಪ್ಪನ್ನು ಸಿಂಪಡಿಸಿ ಮತ್ತು ಹಲ್ಲುಜ್ಜುವ ಬ್ರಷ್‌ನ ಹಿಂಭಾಗದಿಂದ ಸ್ಕ್ರಬ್ ಮಾಡುವ ಮೂಲಕವೂ ಸ್ವಚ್ಛಗೊಳಿಸಬಹುದು.
ಅಡುಗೆಮನೆಯಲ್ಲಿ ಬಳಸುವ ಅರಿಶಿನದಿಂದ ಹಲ್ಲು ಮತ್ತು ನಾಲಿಗೆಯನ್ನು ಸಹ ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ನಾಲಿಗೆಗೆ ಅರಿಶಿನವನ್ನು ಸಿಂಪಡಿಸಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ
ಇದರಿಂದ ನಾಲಿಗೆಯ ಮೇಲಿರುವ ಶಿಲೀಂಧ್ರ, ಬಿಳಿ ಪದರ, ಕೊಳೆ ಮುಂತಾದ ನಾಲಿಗೆಯ ಎಲ್ಲಾ ಸಮಸ್ಯೆಗಳಿಗೂ ಇದು ಪ್ರಯೋಜನಕಾರಿ.
ಮೊಸರು ಪ್ರೊ-ಬಯೋಟಿಕ್ ಆಗಿದೆ. ಇದರಿಂದ ನಾಲಿಗೆಯ ಮೇಲಿರುವ ಶಿಲೀಂಧ್ರ, ಬಿಳಿ ಪದರ, ಕೊಳೆ ಮುಂತಾದ ನಾಲಿಗೆಯ ಎಲ್ಲಾ ಸಮಸ್ಯೆಗಳಿಗೂ ಇದು ಪ್ರಯೋಜನಕಾರಿ. ಇದಕ್ಕಾಗಿ ನಾಲಿಗೆಗೆ ಸ್ವಲ್ಪ ಮೊಸರು ಹಾಕಿ ಬಾಯಿಯನ್ನು ಮುಕ್ಕಳಿಸಿದ ನಂತರ ನೀರಿನಿಂದ ತೊಳೆಯುವುದರಿಂದ ನಾಲಿಗೆಯ ಕೊಳೆ ದೂರವಾಗುತ್ತದೆ
ನಾಲಿಗೆಯನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ ನಿಂಬೆ ರಸದಲ್ಲಿ ಸ್ವಲ್ಪ ಅಡಿಗೆ ಸೋಡಾವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟನ್ನು ಬೆರಳುಗಳ ಸಹಾಯದಿಂದ ನಾಲಿಗೆಗೆ ಹಚ್ಚಿ ಮತ್ತು ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ. ಇದು ನಾಲಿಗೆಯ ಮೇಲಿನ ಬಿಳಿ ಪದರವನ್ನು ತೆರವುಗೊಳಿಸುತ್ತದೆ.
ಆರೋಗ್ಯದ ಕಾಳಜಿ ವಹಿಸಿ ಹಲ್ಲಿನ ಜೊತೆಗೆ ನಾಲಿಗೆಯ ಸ್ವಚ್ಚತೆಯ ಬಗ್ಗೆಯೂ ಗಮನ ಹರಿಸಿದರೆ ಅನೇಕ ರೋಗ ರುಜಿನಗಳು ಬರದಂತೆ ತಡೆಯಬಹುದು.ಉತ್ತಮ ಆರೋಗ್ಯವನ್ನು ಹೊಂದಲು ದೇಹದ ಸ್ವಚ್ಚತೆಯ ಕಡೆಗೂ ಲಕ್ಷ್ಯ ವಹಿಸುವುದು ಒಳಿತು.