ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗೆ ಬಿಗ್ ಶಾಕ್ ; ಹಂದಿ ಜ್ವರಕ್ಕೆ ಬಲಿಯಾದ ಒಂಬತ್ತು ತಿಂಗಳ ತುಂಬು ಗರ್ಭಿಣಿ
ಇನ್ನೇನು ಹೊಸ ಪಾಪುವಿನ ಬರುವಿಕೆಗಾಗಿ ಕಾಯುತ್ತಿದ್ದ ಮನೆಯಲ್ಲಿ ಸೂತಕ ಮನೆ ಮಾಡಿದೆ. ಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ದೊಡ್ಡ ಆಘಾತವೇ ಎದುರಾಗಿದೆ. ಹೌದು. ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ(swine flu) ಬಲಿಯಾಗಿರುವ ಘಟನೆ ನಡೆದಿದೆ.
ಮೃತರು ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಎಂದು ತಿಳಿದು ಬಂದಿದೆ.
ಛಾಯಾಗೆ 4 ವರ್ಷದ ಗಂಡು ಮಗು ಇದ್ದು, 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಇನ್ನು ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾಗೆ ಎಚ್1ಎನ್1 ಸೋಂಕು ತಗುಲಿತ್ತು. ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಿಸದೆ ಛಾಯಾ ಇಂದು ಕೊನೆಯುಸಿರೆಳೆದಿದ್ದಾರೆ. ಇಂತಹ ಒಂದು ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇಡೀ ಜನತೆಗೆ ದೊಡ್ಡ ಶಾಕ್ ಉಂಟಾಗಿದೆ. ಈ ಘಟನೆ ಹಂದಿ ಜ್ವರದ ಬಗ್ಗೆ ಜಾಗ್ರತೆ ವಹಿಸಲು ಒಂದು ಉದಾಹರಣೆಯಾಗಿದೆ.