ಮುಕ್ಕೂರು : 13 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ ಹಾಗೂ ಸಮ್ಮಾನ ಸಮಾರಂಭ

ಮುಕ್ಕೂರು : ಗಣೇಶೋತ್ಸವವು ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಹಬ್ಬವಾಗಿದ್ದು ಮುಕ್ಕೂರು ಪರಿಸರದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಗುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

 

ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಆ.31 ರಂದು 13 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕ್ರೀಡಾಕೂಟ, ಸಮ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲಾಯಿತು. ಬ್ರಿಟಿಷರ ವಿರುದ್ಧದ ಹೋರಾಟವಾಗಿ, ಸನಾತನ ಸಂಸ್ಕೃತಿಯ ಮೇಲಿನ ಆಕ್ರಮಣವನ್ನು ತಡೆದು ದುಷ್ಟ ಶಕ್ತಿಗಳನ್ನು ತಡೆದು ನಿಲ್ಲುವ ಭಾಗವಾಗಿಯು ಗಣೇಶೋತ್ಸವ ದೇಶದಲ್ಲಿ ಮಹತ್ವದ ಪ್ರಭಾವ ಬೀರಿದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೆಯ್ಯುತ್ತಿರುವ ಶ್ವೇತಾ ಕಾನಾವು ಅವರನ್ನು ಸಮ್ಮಾನಿಸಿರುವುದು ಉತ್ತಮ ಕಾರ್ಯ. ಇಂತಹ ಗೌರವ ನೀಡಿರುವ ಗಣೇಶೋತ್ಸವ ಸಂಘವು ಅಬಿನಂದನೆಗೆ ಅರ್ಹವಾದದು ಎಂದ ಸಚಿವ ಅಂಗಾರ, ಆಧುನಿಕ ಕೃಷಿಯಲ್ಲಿ ತೊಡಗುವ ಪ್ರತಿಯೊಬ್ಬರಿಗೆ ಇವರ ಸಾಧನೆ ಸ್ಪೂರ್ತಿಯಾಗಲಿ ಎಂದರು.

ಸಮಾರಂಭ ಉದ್ಘಾಟಿಸಿದ ವನಶ್ರೀ ಗಣಪಯ್ಯ ಭಟ್ ಮಾತನಾಡಿ, ಹಿಂದೂ ಸಂಸ್ಕೃತಿಯ ಹಲವು ಆಚರಣೆಗಳಲ್ಲಿ ಗಣೇಶೋತ್ಸವವು ಒಂದು. ಮುಕ್ಕೂರಿನಂತಹ ಗ್ರಾಮ್ಯ ಪ್ರದೇಶದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ನೆಲೆಯಲ್ಲಿ ಗಣೇಶನ ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದ ಅವರು ಗಣೇಶೋತ್ಸವದ ಆಚರಣೆಯ ಮಹತ್ವದ ಬಗ್ಗೆ ವಿವರಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಮುಕ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಮಾಜದಲ್ಲಿ ಮುಕ್ಕೂರಿನ ಗಣೇಶೋತ್ಸವ ಸಾಮರಸ್ಯ, ಸೌರ್ಹಾದತೆಯನ್ನು ಉಳಿಸುವ ಜತೆಗೆ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಿಸುತ್ತಿದೆ. ಇದಕ್ಕೆ ಊರಿನ ಪ್ರತಿಯೋರ್ವರ ಕೊಡುಗೆ, ಪ್ರೋತ್ಸಾಹ ಕಾರಣವಾಗಿದ್ದು ಇಂದಿನ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು ಈ ಊರಿಗೆ ಸಲ್ಲುತ್ತದೆ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಗಣೇಶೋತ್ಸವದ ಜತೆಗೆ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸ ಇಲ್ಲಿ ನಡೆದಿದೆ. ಇಂತಹ ಅರ್ಥಪೂರ್ಣ ಚಟುವಟಿಕೆಗಳನ್ನು ನಾವೆಲ್ಲರೂ ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ‌ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಹಿಂದೂ ಸಮಾಜದಲ್ಲಿ ಹತ್ತಾರು ಹಬ್ಬ ಹರಿದಿನಗಳು ಇವೆ. ಗಣೇಶೋತ್ಸವವು ಕೂಡ ದೇಶದ ಒಗ್ಗಟಿನ ಹೋರಾಟದ ಜತೆಗೆ ಧಾರ್ಮಿಕವಾಗಿಯು ಮನ್ನಣೆ ಪಡೆದಿದ್ದು ಮುಕ್ಕೂರಿನಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದೆ ಎಂದರು.

ಕೃಷಿ ಸಾಧಕಿಗೆ ಸಮ್ಮಾನ
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತೆ ಶ್ವೇತಾ ಕಾನಾವು ಅವರನ್ನು ಸಚಿವ ಎಸ್ ಅಂಗಾರ ಅವರು ಸಮ್ಮಾನಿಸಿದರು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಅವರು ಶ್ವೇತಾ ಕಾನಾವು ಅವರ ಸಾಧನೆಯ ಕುರಿತಂತೆ ಅಭಿನಂದನಾ ಮಾತುಗಳನ್ನಾಡಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕ ವರ್ಗ ಕರಾಡತನದ ಮೂಲಕ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಸಚಿವ ಅಂಗಾರ ಅವರಿಗೆ ಗೌರವಾರ್ಪಣೆ
ಮುಕ್ಕೂರು ವಾರ್ಡ್ ವ್ಯಾಪ್ತಿಯ ಕುಂಡಡ್ಕ- ಚೆನ್ನಾವರ ಸಂಪರ್ಕ ರಸ್ತೆ, ಕುಂಜಾಡಿ- ತೋಟದಮೂಲೆ ಸಂಪರ್ಕ ರಸ್ತೆ, ಚೆನ್ನಾವರ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒಟ್ಟು 90 ಲಕ್ಷ ರೂ. ಹಾಗೂ ಚೆನ್ನಾವರ ಕುಂಡಡ್ಕ ಸಂಪರ್ಕ ರಸ್ತೆ ವಿಸ್ತರಣೆ, ಹೊಸ ಸೇತುವೆ ನಿರ್ಮಾಣಕ್ಕೆ 4.5 ಕೋ. ರೂ. ಅನುದಾನ ಒದಗಿಸಿದ ಸಚಿವ ಎಸ್. ಅಂಗಾರ ಅವರನ್ನು ಊರವರ ಪರವಾಗಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹಾಗೂ ಅತಿಥಿಗಳು ಸಮ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ಪುಣ್ಯಶ್ರೀ ಕುಂಡಡ್ಕ ಮತ್ತು ತಂಡ ಪ್ರಾರ್ಥಿಸಿದರು. ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.

ದೀಪ ಬೆಳಗಿಸಿ ಉದ್ಘಾಟನೆ
ಬೆಳಗ್ಗೆ ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಅವರು ಶ್ರೀ ದೇವರಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಗಣೇಶೋತ್ಸವದ ಮಹತ್ವದ ಬಗ್ಹೆ ಶುಭ ಹಾರೈಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮಾರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಭಜನ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಸುಬ್ರಹ್ಮಣ್ಯ ದೇವಾಲಯದಿಂದ ನೀಡಿದ ಅನ್ನಪ್ರಸಾದ ವಿತರಿಸಲಾಯಿತು.

ವಿವಿಧ ಸ್ಪರ್ಧೆಗಳು
ಇಡೀ ದಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪ.ಪೂ.ಕಾಲೇಜು, ಪದವಿ ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ನೂರಾರು ಮಂದಿ‌ ಪಾಲ್ಗೊಂಡರು. ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಸಹಿತ ಗಣ್ಯರು ಬಹುಮಾನ ವಿತರಿಸಿದರು. ರಕ್ಷಿತಾ ಕೊಡಂಗೆ ಬಹುಮಾನಿತರ ಪಟ್ಟಿ ವಾಚಿಸಿದರು.

Leave A Reply

Your email address will not be published.