ಭಾರತದಲ್ಲಿ ನಿಜವಾಗಿಯೂ ಬ್ಯಾನ್ ಆಗುತ್ತಾ ಚೀನಾ ಕಂಪನಿಗಳ ಅಗ್ಗದ ಮೊಬೈಲ್ ಫೋನ್!!

ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಿಂದ ಚೀನಾದ ದೈತ್ಯ ಮೊಬೈಲ್ ಕಂಪನಿಗಳನ್ನು ಹೊರಹಾಕುವುದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ಹೀಗಾಗಿ ಚೀನಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹನ್ನೆರಡು ಸಾವಿರ ರೂ. ಗಿಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುವ ಚೀನಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲಿದೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡಿತ್ತು.

ಆದರೆ ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿರುವ ಕೇಂದ್ರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಇಂಥ ಯಾವುದೇ ಪ್ರಸ್ತಾವ ಸದ್ಯ ಕೇಂದ್ರದ ಮುಂದೆ ಇಲ್ಲ. ಇದು ಹೇಗೆ ಸುದ್ದಿಯಾಯಿತು ಎಂದು ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 12 ಸಾವಿರ ರೂ. ಒಳಗಿನ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ಇಂಥ ಪ್ರಸ್ತಾವ ಇಲ್ಲ ಎಂದು ಉತ್ತರಿಸಿದ್ದಾರೆ.

ಚೀನಾ ಕಂಪನಿಗಳ ಅಗ್ಗದ ಹಾಗೂ ಹೆಚ್ಚು ಫೀಚರ್ ಹೊಂದಿರುವ ಮೊಬೈಲ್​ಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಇತರ ಕಂಪನಿಗಳ ಮೊಬೈಲ್​ಗಳ ಮಾರಾಟ ಕುಂಠಿತಗೊಂಡಿದೆ. ಹೀಗಾಗಿ ದೇಶೀಯ ಮೊಬೈಲ್ ಉದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿತ್ತು.

ಅಗ್ಗದ ಮೊಬೈಲ್ ಬ್ಯಾನ್ ಎಂಬ ಸುದ್ದಿಯಿಂದ ಲಕ್ಷಾಂತರ ಮಂದಿ ನೊಂದುಕೊಂಡಿದ್ದರು. ಜತೆಗೆ ಗೊಂದಲವೂ ಏರ್ಪಟ್ಟಿತ್ತು. ಏಕೆಂದರೆ 12 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯ ಮೊಬೈಲ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಒಂದು ವೇಳೆ ಇದು ಬ್ಯಾನ್​ ಆದರೆ ಅದು ಈಗಾಗಲೇ ಮೊಬೈಲ್​ ಫೋನ್​ ಹೊಂದಿರುವವರ ಮೇಲೂ ಪರಿಣಾಮ ಬೀರುತ್ತಾ ಅಥವಾ ಈ ಬೆಲೆಯ ಫೋನ್​ಗಳು ಸಿಗದೇ ಹೋದರೆ ದುಬಾರಿಯದ್ದೇ ಕೊಂಡುಕೊಳ್ಳಬೇಕಾ ಎಂದೆಲ್ಲಾ ಚಿಂತೆ ಕಾಡತೊಡಗಿತ್ತು. ಆದರೆ ಈ ಎಲ್ಲಾ ಗೊಂದಲಗಳಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಭಾರತದಿಂದ ರಫ್ತುಗಳನ್ನು ಹೆಚ್ಚಿಸಲು ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರ ಮನವಿ ಮಾಡಿದೆ. ಮುಂಬರುವ ನಾಲ್ಕು ವರ್ಷಗಳಲ್ಲಿ 300 ಬಿಲಿಯನ್ ಡಾಲರ್‌ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ತಲುಪಲು ಸರ್ಕಾರ ಎದುರು ನೋಡುತ್ತಿದೆ. ಪ್ರಸ್ತುತ ಉತ್ಪಾದನೆಯು ಸುಮಾರು 76 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

Leave A Reply

Your email address will not be published.