ಏನಿದು ಮಾನವ ನಿರ್ಮಿತ ವಿಕೋಪ-ಆ ಗ್ರಾಮದ ಜನತೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದೇಕೆ!??
ಕೊಯನಾಡ್: ಭೀಕರ ಜಲಸ್ಪೋಟಕ್ಕೆ ತುತ್ತಾಗಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿಯಾಗಲು ಬಂದ ಶಾಸಕ ಕೆ.ಜಿ ಬೋಪಯ್ಯ ಅವರ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದಲ್ಲದೇ, ಸೂಕ್ತ ವ್ಯವಸ್ಥೆ ಕಲ್ಪಿಸದೆ ಇದ್ದಲ್ಲಿ ಪತ್ರ ಬರೆದಿಟ್ಟು ಇದೇ ಹೊಳೆಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಹೇಳುವ ಮೂಲಕ ತಮ್ಮ ನೋವನ್ನು ತೋಡಿಕೊಂಡ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರಾಜಪೇಟೆ ತಾಲೂಕಿನ ಕೊಯಾನಾಡ್ ನಲ್ಲಿ ಸಂಭವಿಸಿದ್ದ ಜಲಸ್ಪೋಟಕ್ಕೆ ತುತ್ತಾದ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡರು. ಇದೊಂದು ಮಾನವ ನಿರ್ಮಿತ ವಿಕೋಪವಾಗಿದೆ,ಕಿಂಡಿ ಆಣೆಕಟ್ಟು ನಿರ್ಮಿಸುವಾಗ ಸ್ಥಳೀಯರ ವಿರೋಧವಿದ್ದರೂ ನಿರ್ಮಿಸಲಾಗಿದೆ. ಈಗ ಅದೇ ನಮ್ಮ ಪಾಲಿಗೆ ಮುಳ್ಳಾಗಿದ್ದು, ನೈಸರ್ಗಿಕ ಪ್ರಕೃತಿ ವಿಕೋಪದ ಬದಲು ಮಾನವ ನಿರ್ಮಿತ ವಿಕೋಪಕ್ಕೆ ಸಿಲುಕಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿ ಸಹಿತ ಹಲವು ನಾಯಕರು, ಮಂತ್ರಿಗಳು ಭೇಟಿ ಕೊಟ್ಟರೂ ಪರಿಹಾರ ಶೂನ್ಯವಾಗಿದೆ. ನಮ್ಮ ಸಮಸ್ಯೆಯನ್ನು ಆಲಿಸಬೇಕಾದವರೇ ಆಲಸ್ಯತನ ತೋರಿಸುತ್ತಿದ್ದೂ, ಸೂಕ್ತ ವ್ಯವಸ್ಥೆ ಕಲ್ಪಿಸದೆ ಇದ್ದಲ್ಲಿ ನಾವೆಲ್ಲರೂ ನಮ್ಮ ಕುಟುಂಬದ ಸಹಿತ ಕಿಂಡಿ ಅಣೆಕಟ್ಟುವಿನಿಂದ ಹಾರಿ ಆತ್ಮಹತ್ಯೆಗೆ ಶರಣಾಗುವುದಾಗಿ ತಮ್ಮ ನೋವನ್ನು ಶಾಸಕ ಬೋಪಯ್ಯ ನವರ ಮುಂದೆ ಹೇಳಿಕೊಂಡರು.