Heart Attack : 30 ರ ಆಸುಪಾಸಿಗೇ ಹೃದಯಾಘಾತ ಯಾಕಾಗುತ್ತದೆ? ಇಲ್ಲಿ ತೂಕ, ಬೊಜ್ಜು…ಯಾವುದು ಹಾನಿಕಾರಕ?

ಹುಟ್ಟು ಆಕಸ್ಮಿಕ- ಸಾವು ನಿಶ್ಚಿತ. ಆದರೂ ವರದಾನವಾಗಿ ದೊರೆತ ಈ ದೇಹವನ್ನು ಸತ್ವಯುತ ಆಹಾರ ಸೇವನೆ ನಿಯಮಿತ ವ್ಯಾಯಾಮ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಲು ಪ್ರತಿಯೊಬ್ಬರು ಸೆಣಸಾಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಈಗಿನ ಬದಲಾಗಿರುವ ಆಹಾರ ಕ್ರಮ ಮತ್ತು ಒತ್ತಡಯುತ ಕೆಲಸಗಳ ನಡುವೆ ಆರೋಗ್ಯದ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ಧೋರಣೆಯಿಂದ ಆರೋಗ್ಯ ಸಮಸ್ಯೆ ನಿವಾರಣೆಯಾಗುವ ಬದಲು ಉಲ್ಬಣ ಗೊಳ್ಳುತ್ತಿರು ವುದು ವಿಪರ್ಯಾಸ. ಇತ್ತೀಚಿನ ದಿನಗಳಲ್ಲಿ ಯುವಜನರು ಮತ್ತು ನಡು ಹರೆಯದವರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಏಕೆ ಕಳೆದ ವರ್ಷ ನಿಧನರಾದ 39 ರ ಹರೆಯದ ಚಿರಂಜೀವಿ ಸರ್ಜಾ ಹಾಗೂ ಪುನೀತ್ ರಾಜ್‍ಕುಮಾರ್ ಇದಕ್ಕೆ ಜೀವಂತ ನಿದರ್ಶನ.

 

ಈಗ ದಾಖಲಾಗುತ್ತಿರುವ ಹೃದಯಾಘಾತ ( Heart Attack) ಪ್ರಕರಣಗಳಲ್ಲಿ ಪ್ರತಿ 5 ಪ್ರಕರಣದಲ್ಲಿ ಒಂದು ಪ್ರಕರಣವು 40 ವರ್ಷದೊಳಗಿನ ವಯೋಮಾನದವರದ್ದಾಗಿದೆ.
ಇನ್ನು 30 ವರ್ಷದೊಳಗಿನ ವರಿಗೆ ಹೃದಯಾಘಾತ ವಾಗುವುದು ಪ್ರತಿ ವರ್ಷ ಶೇ.2 ರಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹಾರ್ಟ್ ಅಟ್ಯಾಕ್ ನಲ್ಲಿ ಹೆಚ್ಚಿನ ಪ್ರಕರಣಗಳು ಮಯೋ ಕಾರ್ಡಿಯಲ್ ಇನ್ಫಾಕೇಷನ್ ನಿಂದ ಆಗುತ್ತಿದೆ. ಹಾರ್ಟ್ ಅಟ್ಯಾಕ್ ಹೇಗೆ ಸಂಭವಿಸುತ್ತದೆ? ಅದರ ಮುನ್ಸೂಚನೆ ಗಳೇನು? ಹೊಟ್ಟೆಯ ಸುತ್ತಳತೆ ಕೂಡ ಇದಕ್ಕೆ ಕಾರಣ ವಾಗಬಹುದೇ? ಈ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಹೃದಯ ನಮ್ಮ ದೇಹದ ನರಗಳಿಗೆ ರಕ್ತವನ್ನು ಸರಬರಾಜು ಮಾಡುವ, ದೇಹಕ್ಕೆ ರಕ್ತವನ್ನು ಪೂರೈಸುವ ಪಂಪ್ ನಂತೆ ಕಾರ್ಯನಿರ್ವಹಿಸುತ್ತದೆ. ರಕ್ತದ ಮೂಲಕವೇ ನಮ್ಮ ಜೀವ, ಜೀವನಕ್ಕೆ ಅತಿಮುಖ್ಯವಾಗಿ ಬೇಕಾದ ಆಮ್ಲಜನಕ ಮತ್ತು ಪೋಷಕಾಂಶಗಳು ದೇಹದ ಎಲ್ಲ ಜೀವಕೋಶಗಳಿಗೆ ತಲುಪಿ ಉಸಿರಾಟ, ಹೃದಯ ಬಡಿತ, ಮತ್ತಿತ್ತರ ದೈಹಿಕ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತವೆ.
ಹೃದಯಾಘಾತ ಎಂದರೆ ಹೃದಯವು ಇದ್ದಕ್ಕಿದಂತೆ ದೇಹಕ್ಕೆ ರಕ್ತ ಸಂಚಲನೆ ಸ್ಥಗಿತವಾಗಿ , ಹೃದಯದ ಒಂದು ಭಾಗದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡಚಣೆಯಾಗುವುದಲ್ಲದೆ, ರಕ್ತನಾಳಗಳು ಮತ್ತು ಸ್ನಾಯು ಗಳಿಗೂ ಹಾನಿಯುಂಟಾಗುತ್ತದೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ. ಹೃದಯ ತನ್ನ ಕಾರ್ಯ ನಿಲ್ಲಿಸಿದ ತಕ್ಷಣ ಉಸಿರಾಟ ನಿಂತು ಸಾವು ಸಂಭವಿಸಲೂಬಹುದು. ಹಾಗೆಯೇ ಹೃದಯಾಘಾತ ವಾದ ತಕ್ಷಣ ಪ್ರಥಮ ಚಿಕಿತ್ಸೆ ದೊರೆತರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕೂಡ ಇದೆ.
ದೇಹದ ಇತರೆ ಸಮಸ್ಯೆಗಳಿಂದಲೂ ಕೂಡ ಹೃದಯಾಘಾತ ಆಗುವ ಸಾಧ್ಯತೆ ಇದೆ. ಸಕ್ಕರೆ ಕಾಯಿಲೆ, ಹೈ ಕೊಲೆಸ್ಟ್ರಾಲ್, ಹೆಚ್ಚುರಕ್ತ ದೊತ್ತಡದಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿ ಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗಿ ರಕ್ತ ಚಲನೆಗೆ ಅಡ್ಡಿಯಾಗುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತ ಸಂಚಾರ ವಾಗದೆಯೂ ಕೂಡ ಹೃದಯಾಘಾತವಾಗುತ್ತದೆ.

ಬಹುತೇಕ ಹೃದಯಾಘಾತ ಪ್ರಕರಣಗಳಲ್ಲಿ ಎದೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಿಕೊಂಡು ಕೆಲ ನಿಮಿಷಗಳವರೆಗೆ ಇರುತ್ತದೆ. ಎದೆಯ ಭಾಗದಲ್ಲಿ ತೀವ್ರ ನೋವು, ಎದೆ ಕಿವುಚಿದಂತಹ ಅನುಭವ ವಾಗುತ್ತದೆ.
ಕೈ , ದವಡೆ, ಬೆನ್ನು, ಕುತ್ತಿಗೆ ಇಲ್ಲವೇ ಹೊಟ್ಟೆಯ ಭಾಗ ದಲ್ಲಿ ನೋವು ಗೋಚರಿಸಬಹುದು. ವಾಂತಿ ಬರುವಂತೆ ಭಾಸವಾಗಿ, ತಲೆ ತಿರುಗುವ ಅನುಭವ ಜೊತೆಗೆ ಬೆವರು ಬರಬಹುದು.
ಕೆಲವೊಮ್ಮೆ ಯಾವುದೇ ರೀತಿಯ ನೋವು ಕಾಣಿಸದೆ ಉಸಿರಾಡಲು ತೊಂದರೆಯಾಗುವುದು ಕೂಡ ಹೃದಯಾಘಾತದ ಒಂದು ಲಕ್ಷಣವಾಗಿದೆ. ಮನುಷ್ಯನ ದೇಹದ ತೂಕ ಸರಿಯಾದ ಪ್ರಮಾಣದಲ್ಲಿ ಇದ್ದರೂ ಹೊಟ್ಟೆಯಲ್ಲಿನ ಬೊಜ್ಜು ಅಧಿಕವಾಗಿದ್ದರೆ ಅದು ಸಮಸ್ಯೆಗೆ ಎಡೆಮಾಡಿ ಕೊಡುವುದು. ಅಷ್ಟೇ ಅಲ್ಲದೆ ಹೊಟ್ಟೆಯ ಸುತ್ತಳತೆ ಒಂದು ಇಂಚು ಹೆಚ್ಚಿದಷ್ಟೆ ಹೃದಯಾಘಾತದ ಸಂಭವನೀಯತೆ ಶೇ.10 ರಷ್ಟು ಹೆಚ್ಚುತ್ತದೆ ಎಂದು
ಆಕ್ಸ್ಫರ್ಡ್ ಸಂಶೋಧಕರು ಅಚ್ಚರಿಯ ಸಂಗತಿಯನ್ನು ತಿಳಿಸಿದ್ದಾರೆ. ಬ್ರಿಟನ್ ದೇಶದಲ್ಲಿ 13 ವರ್ಷಗಳ ಕಾಲ 4ಲಕ್ಷಕ್ಕೂ ಅಧಿಕ ಜನರ ಮೇಲೆ ಅಧ್ಯಯನ ನಡೆಸಿ ಈ ಅಂಶವನ್ನು ಪತ್ತೆ ಮಾಡಲಾಗಿದೆ. ಈ ಅಧ್ಯಯನದ ಪ್ರಕಾರ ಹೊಟ್ಟೆಯ ಬೊಜ್ಜು ಹೆಚ್ಚಿರುವ ಜನರಲ್ಲಿ ಹೃದಯದ ತೊಂದರೆಗಳು ಹೆಚ್ಚಾಗಿ ಕಂಡುಬಂದಿದೆ.

35 ವರ್ಷದೊಳಗಿನವರಿಗೆ ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳಲು ಕಾರಣ ನೋಡ ಹೊರಟರೆ
ಕಳಪೆ ಜೀವನ ಶೈಲಿ, ಅತಿಯಾದ ಧೂಮಪಾನ ಮತ್ತು ಮದ್ಯಪಾನ, ಅತಿ ತೂಕ ಅಥವಾ ಬೊಜ್ಜು, ಬಿ. ಪಿ ಅಥವಾ ಡಯಾಬಿಟಿಸ್

ಮುನ್ನೆಚ್ಚರಿಕಾ ಕ್ರಮ :
ಆರೋಗ್ಯವನ್ನು ಕಾಪಾಡಲು ನಿಯಮಿತ ಆಹಾರ ಕ್ರಮ, ಫಾಸ್ಟ್ ಫುಡ್ ಯುಗದಲ್ಲಿ ಆರೋಗ್ಯಯುತ ಸತ್ವಪೂರ್ಣ ಪೋಷಕಾಂಶ ಉಳ್ಳ ಆಹಾರಸೇವನೆ ಅತಿ ಮುಖ್ಯ.

ಫೈಬರ್ ಯುಕ್ತ ಆಹಾರ ಸೇವಿಸಬೇಕು.
ಉಪ್ಪು, ಸೋಡಿಯಂ ಅಂಶದ ಪದಾರ್ಥ ಗಳನ್ನು ಕಡಿಮೆ ಸೇವಿಸಬೇಕು
ಪ್ಯಾಕೇಜ್ ಮಾಡಿದ ಆಹಾರ ಸೇವನೆ ಮಾಡದಿರುವುದು ಒಳಿತು.
ಬಿ. ಪಿ , ಶುಗರ್ ಸಮಸ್ಯೆ ಇದ್ದರೆ, ಟೆಸ್ಟ್ ಮಾಡಿಸಿಕೊಂಡು ಮುಂಜಾಗ್ರತೆ ವಹಿಸಬೇಕು.

ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು,ಜೀವನ ಶೈಲಿಗೆ ಅನುಗುಣವಾಗಿ ಆರಂಭವಾಗುತ್ತದೆ. ದಿನನಿತ್ಯ ನಡಿಗೆ, ವಾಕಿಂಗ್, ಯೋಗ, ದೈಹಿಕ ಚಟುವಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.

Leave A Reply

Your email address will not be published.