ತಾಯಿಯ ಪಕ್ಕದಲ್ಲೇ ಮಲಗಿದ್ದ ಮಗು ಕಳ್ಳತನ ಪ್ರಕರಣ ; ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆಯಾಯ್ತು ಕೂಸು
ತಾಯಿಯು ನಿದ್ದೆಯಲ್ಲಿದ್ದ ವೇಳೆ ಪಕ್ಕದಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿಕೊಂಡು ಹೋಗಿರೋ ಆಘಾತಕಾರಿ ಘಟನೆ ಕಳೆದ ವಾರ ನಡೆದಿತ್ತು. ಇದೀಗ ಆ ಮಗು ಬಿಜೆಪಿ ನಾಯಕಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.
ಇಂತಹದೊಂದು ಘಟನೆ ಮಥುರಾ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದ್ದು, ತಾಯಿಯೂ ತನ್ನ ಏಳು ತಿಂಗಳ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ನಿದ್ದೆಗೆ ಜಾರಿದ್ದರು. ಈ ವೇಳೆ ಅನುಮಾನಸ್ಪದ ವ್ಯಕ್ತಿಯೊಬ್ಬ ಸುತ್ತ ಮುತ್ತ ನೋಡುತ್ತಾ ತಾಯಿಯ ಪಕ್ಕ ಮಲಗಿದ್ದ ಮಗುವನ್ನು ಕದ್ದು ಓಡಿ ಹೋಗಿದ್ದಾನೆ. ಆ ಮಗು ಅಲ್ಲಿಂದ 100 ಕಿ.ಮೀ ದೂರದ ಫಿರೋಜಾಬಾದ್‌ನ ಬಿಜೆಪಿ ಕಾರ್ಪೊರೇಟರ್‌ನ ಮನೆಯಲ್ಲಿ ಪತ್ತೆಯಾಗಿದ್ದು, ಮಕ್ಕಳನ್ನು ಕದ್ದು ಮಾರಾಟ ಮಾಡುವ ದಂಧೆಯನ್ನು ಭೇದಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿಯ ಕಾರ್ಪೋರೇಟರ್ ವಿನಿತಾ ಅಗರ್ವಾಲ್ ಮತ್ತು ಅವರ ಪತಿ ತಮಗೆ ಗಂಡು ಮಗು ಬೇಕೆಂದು, ಮಕ್ಕಳ ಕಳ್ಳತನ ಮಾಡುವ ದೊಡ್ಡ ಗ್ಯಾಂಗ್‌ನ ಸದಸ್ಯರಾಗಿ ಇಬ್ಬರು ವೈದ್ಯರಿಂದ 1.8 ಲಕ್ಷ ರೂ.ಗೆ ಮಗುವನ್ನು ಖರೀದಿಸಿದ್ದರು. ದಂಪತಿಗೆ ಈಗಾಗಲೇ ಮಗಳಿದ್ದಾಳೆ ಎಂದು ವರದಿ ಮಾಡಿದೆ.
ಪ್ಲಾಟ್‌ಫಾರ್ಮ್‌ನಿಂದ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯಗಳು ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದೀಗ ಪೊಲೀಸರು ಮಗುವನ್ನು ಎತ್ತಿಕೊಂಡು ಹೋದ ವ್ಯಕ್ತಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ. ಮಥುರಾದ ರೈಲ್ವೇ ಪೊಲೀಸರು ಮಗುವನ್ನು ಅವರ ತಾಯಿಗೆ ಹಸ್ತಾಂತರಿಸಿದ್ದಾರೆ. ಬಂಧಿತ ವೈದ್ಯರಿಂದ ದುಡ್ಡನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಷ್ತಾಕ್, ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಮಗುವನ್ನು ಅಪಹರಣ ನಡೆಸಿದೆ ಎಂದು ಹೇಳಿದ್ದಾರೆ. “ದೀಪ್ ಕುಮಾರ್ ಎಂಬ ವ್ಯಕ್ತಿ ಮಗುವನ್ನು ಕದ್ದೊಯ್ದಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ. ಅವನು ನೆರೆಯ ಹತ್ರಾಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡಿರುವ ಗ್ಯಾಂಗ್‌ವೊಂದರ ಭಾಗವಾಗಿದ್ದಾರೆ. ಇತರ ಕೆಲವು ಆರೋಗ್ಯ ಕಾರ್ಯಕರ್ತರು ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಮಗು ಯಾರ ಮನೆಯಲ್ಲಿದೆ ಎಂದು ನಾವು ವಿಚಾರಣೆ ನಡೆಸಿದಾಗ ಮಗು ಪತ್ತೆಯಾಗಿದೆ. ಆರೋಪಿಗಳಿಗೆ ಒಬ್ಬಳೇ ಮಗಳಿದ್ದು, ಗಂಡು ಮಗುವೊಂದನ್ನು ಬಯಸಿದ್ದರು. ಅದಕ್ಕಾಗಿ ಅವರು ಮಕ್ಕಳ ಕಳ್ಳತನ ಮಾಡುವ ಗ್ಯಾಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು” ಎಂದು ಮುಷ್ತಾಕ್ ಪತ್ರಕರ್ತರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಬಂಧಿತ ಕಾರ್ಪೊರೇಟರ್ ಹಾಗೂ ಬಿಜೆಪಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳಿದೆ.