ಒಂದು ಬೆಕ್ಕಿನ ಕೂಗಿನಿಂದಾಗಿ ಹೋಯ್ತು ವ್ಯಕ್ತಿಯ ಪ್ರಾಣ!

ಒಂದು ಬೆಕ್ಕಿನ ಕೂಗಿನಿಂದಾಗಿ ಒಬ್ಬ ವ್ಯಕ್ತಿಯ ಪ್ರಾಣವೇ ಹೋಗಿರುವಂತಹ ಆಶ್ಚರ್ಯಕರ ಘಟನೆ ನಡೆದಿದ್ದು, ಈ ಘಟನೆ ಕೇಳಿದ ಮೇಲಂತೂ ಇಂತವರು ಇದ್ದಾರಾ ಅನ್ನೋ ಪ್ರಶ್ನೆ ಮೂಡುವಂತಾಗಿದೆ.

 

ಹೌದು. ಬೆಕ್ಕಿನ ನಿರಂತರ ಕೂಗಾಟಕ್ಕೆ ಸಿಟ್ಟಾದ ನೆರೆಮನೆಯ ಅಪ್ರಾಪ್ತ ಬಾಲಕರು ಬೆಕ್ಕಿನ ಮಾಲೀಕರಿಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಎಜಾಝ್‌ ಮತ್ತು ಬ್ರಾನ್ ಎಂಬ ಇಬ್ಬರು ಯುವಕರು ತಮ್ಮ ಕೆಲಸ ಮುಗಿಸಿ ರೂಮಿಗೆ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಸಿಕ್ಕ ಬೆಕ್ಕೊಂದನ್ನು ರೂಮಿಗೆ ಎತ್ತಿಕೊಂಡು ಹೋಗಿದ್ದಾರೆ. ಈ ಬೆಕ್ಕು ರಾತ್ರಿ ವೇಳೆ ನಿರಂತರವಾಗಿ ಕೂಗುತ್ತಿತ್ತು. ಈ ಕೂಗು ಹರೀಶ್ವರ್ ರೆಡ್ಡಿ ಎಂಬುವವರ ನಿದ್ರೆಗೆ ಭಂಗ ತಂದಿದೆ. ಮೊದಲೇ ಕುಡಿತದ ಅಮಲಿನಲ್ಲಿದ್ದ ರೆಡ್ಡಿ ಕೋಪದಿಂದ ಎಜಾಝ್‌ ರೂಮಿಗೆ ಹೋಗಿ ಅಸಮಾಧಾನ ಹೊರಹಾಕಿದ್ದಾನೆ. ಈ ವೇಳೆ ಜಗಳ ನಡೆದಿದ್ದು, ಕೋಪದ ಭರದಲ್ಲಿ ಅಪ್ರಾಪ್ತ ಬಾಲಕ ಎಜಾಝ್‌ ಹುಸೇನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದ ಎಜಾಝ್‌ನನ್ನು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದ ನಿವಾಸಿ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) ಮತ್ತು ಅಪ್ರಾಪ್ತ ಬಾಲಕ (17) ಬಂಜಾರಾ ಹಿಲ್ಸ್ ರಸ್ತೆ ಸಂಖ್ಯೆ 10 ರ ಮಿಥಿಲಾನಗರದಲ್ಲಿರುವ ಡಾ.ಮೆನನ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಎಜಾಝ್‌ ಹುಸೇನ್ (20) ಮತ್ತು ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಸಹ ಅದೇ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ವರ್ ರೆಡ್ಡಿ, ಎಜಾಝ್‌ ಮೇಲೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸುಳ್ಳು ದೂರು ದಾಖಲಿಸಿದ್ದರು. ಬಳಿಕ ಮೃತನ ಸ್ನೇಹಿತ ಬ್ರಾನ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ ವೇಳೆ ನಿಜ ಘಟನೆ ಬೆಳಕಿಗೆ ಬಂದಿದೆ.

Leave A Reply

Your email address will not be published.