ನವಯುವಕರಂತೆ ವಾಲಿಬಾಲ್ ಆಡಿ, ಆಕರ್ಷಕ ಸರ್ವ್ ಮಾಡಿ ಬೆರಗು ಮೂಡಿಸಿದ ಮುಖ್ಯಮಂತ್ರಿ !
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಸೋಮವಾರ ಜಲಂಧರ್ ನ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ವಾಲಿಬಾಲ್ ಆಟವನ್ನು ಆಡಿದ್ದಾರೆ.
ಎರಡು ತಿಂಗಳ ಕಾಲ ನಡೆಯುವ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಭಗವಂತ್ ಮಾನ್ ಅವರು ಸುಮಾರು 10-15 ನಿಮಿಷಗಳ ಕಾಲ ಕ್ರೀಡಾಪಟುಗಳೊಂದಿಗೆ ವಾಲಿಬಾಲ್ ಪಂದ್ಯವನ್ನು ಆಡಿದ್ದಾರೆ. ನೆಟ್‍ನಲ್ಲಿ ತಾವೂ ಕೂಡ ವಾಲಿಬಾಲ್ ಸರ್ವ್ ಮಾಡಿ ಆಟದ ಕೌಶಲ್ಯ ಮೆರೆದಿದ್ದಾರೆ.
ವಾಲಿಬಾಲ್ ಅಂಕಣದ ಹೊರಗೆ ಭದ್ರತಾ ಸಿಬ್ಬಂದಿ ನಿಂತಿದ್ದರು. ಈ ವೇಳೆ ಟ್ರ್ಯಾಕ್‍ಸೂಟ್ ಮತ್ತು ಕ್ಯಾಪ್ ಧರಿಸಿ ಮೈದಾನಕ್ಕೆ ಇಳಿದ ಭಗವಂತ್ ಮಾನ್ ಅವರು ಎದುರಾಳಿಗಳು ನೀಡಿದ ಪಾಸ್ ಅನ್ನು ಒಂದೇ ಕೈಯಿಂದ ತಡೆದು ನಿಲ್ಲಿಸಿದ್ದು ಅಲ್ಲಿದ್ದವರಿಗೆ ಬೆರಗು ಮೂಡಿಸಿದೆ. ಭಗವಂತ್ ಮಾನ್ ಅವರು ಕೇವಲ ಆಟವಷ್ಟೇ ಅಲ್ಲ. ತಮ್ಮ ತಂಡಕ್ಕೆ ಅಂಕವನ್ನು ಸಹ ತಂದು ಕೊಟ್ಟಿದ್ದಾರೆ.
ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸುವ ಮುನ್ನ ಮಾತನಾಡಿದ ಅವರು, ನಾಲ್ಕು ಲಕ್ಷಕ್ಕೂ ಹೆಚ್ಚು ಆಟಗಾರರು 28 ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯಮಟ್ಟದ ವಿಜೇತರಿಗೆ ಒಟ್ಟು 6 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಬಾರಿಯ ಕ್ರೀಡಾಕೂಟಗಳು ರಾಜ್ಯದ ಕ್ರೀಡಾ ಕ್ಯಾಲೆಂಡರ್‍ನಲ್ಲಿ ವಾರ್ಷಿಕ ವೈಶಿಷ್ಟ್ಯವಾಗಲಿದೆ. ಪಂಜಾಬ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಂತೋಷವಾಗಿರುವುದನ್ನು ಕಂಡು ನಾನು ಹರ್ಷಗೊಂಡಿದ್ದೇನೆ. ರಾಜ್ಯ ಸರ್ಕಾರವು ರಾಜ್ಯಾದ್ಯಂತ ಕ್ರೀಡೆಯನ್ನು ಉತ್ತೇಜಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಯುವಕರ ಸಾಮರ್ಥ್ಯವನ್ನು ಬೆಂಬಲಿಸುತ್ತಿದೆ ಎಂದು ತಿಳಿಸಿದ್ದಾರೆ.