ಆರ್ಯಾಪು ಕೊಲ್ಯಕೆರೆಗೆ ಬಿದ್ದ ಬೃಹತ್ ಮರ | ಕೆರೆ ಕಟ್ಟೆಗೆ ಹಾನಿ
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪದಲ್ಲಿರುವ ಪುರಾತನ ಕಾಲದ ಕೊಲ್ಯ ಕೆರೆ’ ಯ ಬದಿಯಲ್ಲಿದ್ದ ಬೃಹತ್ ಗಾತ್ರದ ಮರಗಳೆರಡು ಬುಡಸಮೇತ ಉರುಳಿಬಿದ್ದು, ಸಂಪೂರ್ಣವಾಗಿ ಕೆರೆಯನ್ನು ಆವರಿಸಿಕೊಂಡಿದೆ. ಮಾತ್ರವಲ್ಲದೆ ಅಭಿವೃದ್ಧಿಗೊಂಡಿದ್ದ ಕೆರೆಗೆ ಹಾನಿಯಾಗಿದೆ.
ಮರಗಳು ಬುಡಸಮೇತ ಉರುಳಿ ಬಿದ್ದಿರುವ ಪರಿಣಾಮವಾಗಿ ಕೆರೆಯ ಬದಿಯಲ್ಲಿರುವ ರಸ್ತೆ ಭಾಗ ಕುಸಿದು ಅಪಾಯದ ಸ್ಥಿತಿಯಲ್ಲಿದ್ದು, ರಸ್ತೆ ಸಂಪರ್ಕಕ್ಕೆ ತಡೆಯಾಗುವ ಆತಂಕ ಎದುರಾಗಿದೆ.
ಸಂಪ್ಯ ಸಮೀಪ, ಮಾಣಿ-ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸಂಪ್ಯ- ಬಾರಿಕೆ ರಸ್ತೆಯ ಬದಿಯಲ್ಲಿ ಅರಸರ ಕಾಲದದ್ದೆಂಬ ಇತಿಹಾಸ ಹೊಂದಿರುವ ಕೊಲ್ಯ ಕೆರೆ ಇದೆ. ಈ ಭಾಗದಲ್ಲಿ ನಡೆಯುವ ಗಣೇಶೋತ್ಸವ, ಶಾರದೋತ್ಸವ ಕಾರ್ಯಕ್ರಮಗಳಲ್ಲಿ ಆರಾಧಿಸಲ್ಪಟ್ಟ ವಿಗ್ರಹಗಳ ಜಲಸ್ತಂಭನ ಮಾಡುವ ಕೆರೆಯಾಗಿಯೂ ಕೊಲ್ಯ ಕೆರೆ ಗುರುತಿಸಿಕೊಂಡಿದೆ.
ಸರ್ಕಾರಿ ದಾಖಲೆಯ ಪ್ರಕಾರ 8 ಸೆಂಟ್ಸ್ ವಿಸ್ತೀರ್ಣವಿರುವ, ಐತಿಹಾಸಿಕ ಹಿನ್ನಲೆಯಿರುವ ಕೊಲ್ಯ ಕೆರೆಯನ್ನು 10 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯ ರೂ.16 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಚೌಕಾಕಾರದಲ್ಲಿರುವ ಕೆರೆಯ ಸುತ್ತಲೂ ಬದಿಗೆ ಕಗ್ಗಲ್ಲಿನ ತಡೆಗೋಡೆ ನಿರ್ಮಿಸಿ, ಸುತ್ತಲೂ ಕಬ್ಬಿಣದ ಸಲಾಕೆಯ ಆವರಣ ಗೇಟ್ (ಬೇಲಿ) ನಿರ್ಮಿಸಲಾಗಿತ್ತು. ಕೆರೆಗೆ ಇಳಿಯಲು ಮೆಟ್ಟಿಲುಗಳನ್ನು ನಿರ್ಮಿಸುವ ಮೂಲಕ ಸುಂದರಗೊಳಿಸಲಾಗಿತ್ತು. 10 ಅಡಿಯಷ್ಟು ಆಳವಿರುವ ಕೊಲ್ಯ ಕೆರೆಯಲ್ಲಿ ಕಡು ಬೇಸಿಗೆ ಕಾಲದಲ್ಲೂ ನೀರು ಇರುತ್ತದೆ.
ಈ ಹಿಂದಿನಿಂದಲೂ ಕೆರೆಯಲ್ಲಿ ಸ್ಥಳೀಯರೇ ಮೀನು ಮರಿಗಳನ್ನು ಹಾಕಿ ಸಾಕುತ್ತಿದ್ದರು. ಈಗಲೂ ಈ ಕೆರೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮೀನುಗಳಿವೆ.