ಟೊಮೆಟೋ ಜ್ವರ : ಕರ್ನಾಟಕದಲ್ಲಿ ಹೈ ಅಲರ್ಟ್ | ಮಕ್ಕಳು ಕೈ ಬೆರಳು ಚೀಪದಂತೆ ನೋಡಿಕೊಳ್ಳಿ – ಪೋಷಕರಿಗೆ ಆರೋಗ್ಯ ಇಲಾಖೆ ಸೂಚನೆ
ನೆರೆಯ ರಾಜ್ಯ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೇ 6ರಂದು ಮೊದಲು ಮಂಕಿಪಾಕ್ಸ್ ಪ್ರಕರಣ ದಾಖಲಾಗಿತ್ತು. ಈಗ ಟೊಮೆಟೊ ಜ್ವರ ಪ್ರಕರಣಗಳ ಸಂಖ್ಯೆ ನೆರೆಯ ರಾಜ್ಯಗಳಲ್ಲಿ ಹೆಚ್ಚಾಗುತ್ತಿದ್ದು, ಕರ್ನಾಟಕ ರಾಜ್ಯಕ್ಕೂ ಕಾಲಿಡುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಆರೋಗ್ಯ ಇಲಾಖೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸದ್ಯ ಕೇರಳದಲ್ಲಿ ಈ ಪ್ರಕರಣಗಳ ಸಂಖ್ಯೆ ವೇಗವಾಗಿ ಏರಿಕೆಯಾಗಿದ್ದು, ತಮಿಳುನಾಡಿನಲ್ಲೂ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಇದೆ.
ಈಗ ಕರ್ನಾಟಕದಲ್ಲೂ ಅಕಾಲಿಕ ಮಳೆಯ ನಡುವೆ ಟೊಮೆಟೊ ಜ್ವರದ ಭೀತಿ ಎದುರಾದ ಹಿನ್ನೆಲೆ ಆರೋಗ್ಯ ಇಲಾಖೆಯು ಕಟ್ಟೆಚ್ಚರ ವಹಿಸಲು ಚಿಂತನೆ ನಡೆಸಿದೆ.
ಟೊಮೆಟೊ ಫ್ಲೂ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಎಚ್ಚರಿಕೆಯ ಬೆನ್ನಲ್ಲಿ ರಾಜ್ಯದಲ್ಲಿ ಟೊಮೆಟೊ ಜ್ವರ ಹೆಚ್ಚಾದಂತೆ ಅಗತ್ಯ ಕ್ರಮಕ್ಕೆ ನಿರ್ಧಾರ ಕೈಗೊಂಡಿರುವ ಆರೋಗ್ಯ ಇಲಾಖೆಯು, ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಹಾಗೂ ಜನರ ಮೇಲೆ ನಿಗಾ ಇಡುವಂತೆ ಡಿಹೆಚ್ ಓಗಳಿಗೆ ಸೂಚನೆ ನೀಡಿದೆ.
ಟೊಮೆಟೊ ಜ್ವರವು ಮಕ್ಕಳಲ್ಲಿ ಅದರಲ್ಲೂ ಶಾಲೆಗೆ ಹೋಗುತ್ತಿರುವ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಭೀತಿ ಹೆಚ್ಚಾಗಿದೆ. ಈ ಜ್ವರವು ಮಕ್ಕಳಲ್ಲಿ ಬಹುಬೇಗನೆ ಹರಡುತ್ತಿದ್ದು, ಹಾಗಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಹಾಗೂ ಮಕ್ಕಳು ಕೈ ಬೆರಳುಗಳನ್ನು ಚೀಪುವುದನ್ನು ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಪೋಷಕರಿಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ.
ಈ ಟೊಮೆಟೋ ಜ್ವರವು ಮೊದಲಿಗೆ ಸಣ್ಣ ಗುಳ್ಳೆಗಳಾಗಿ ಕಾಣಿಸಿಕೊಳ್ಳುತ್ತವೆ. ನಂತರ ಮೈ ಕೈ, ಬಾಯಿ ಸುತ್ತ ಕೆಂಪು ಗುಳ್ಳೆಗಳು, ಅತಿಸಾರ, ಜ್ವರ, ವಾಂತಿ, ಮೈಕೈನೋವು ಕಾಣಿಸಿಕೊಳ್ಳುವುದು ಇದು ಟೊಮೆಟೊ ಜ್ವರದ ಲಕ್ಷಣ. ಈ ರೀತಿಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.