ಗೋಡೆಯಲ್ಲಿ ಅಂಟಿದ್ದ ಸೊಳ್ಳೆಯಿಂದ ಸಿಕ್ಕಿತು ಕಳ್ಳನ ಗುರುತು!
ಇಂದಿನ ಕಳ್ಳರು ಸಾಮಾನ್ಯ ಕಳ್ಳರಾಗಿರುವುದಿಲ್ಲ. ಯಾಕೆಂದರೆ, ಎಲ್ಲರೂ ಬುದ್ಧಿವಂತರಾಗಿ ಇದ್ದು ತುಂಬಾ ದೊಡ್ಡ ಖತರ್ನಾಕ್ ಪ್ಲಾನ್ ನೊಂದಿಗೆ ಕಳ್ಳತನಕ್ಕೆ ಇಳಿಯುತ್ತಾರೆ. ಆದ್ರೆ ಕಳ್ಳರು ಅದೆಷ್ಟು ದೊಡ್ಡ ಪ್ಲಾನ್ ಮಾಡಿದ್ರು, ಪೊಲೀಸ್ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟನೆ ಬಿಡಿ. ಅದೆಂತಹಾ ದೊಡ್ಡ ಪ್ರಕರಣಗಳಲ್ಲಿ ಕೂಡ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಇಲ್ಲೊಂದು ಕಡೆ ಆರೋಪಿಯನ್ನು ಪತ್ತೆ ಹಚ್ಚಿದ್ದು ಮಾತ್ರ ಹಾಸ್ಯಮಯವಾಗಿ ಕಂಡಿದೆ.
ಹೌದು. ಅಪಾರ್ಟ್ಮೆಂಟ್ಗೆ ನುಗ್ಗಿದ ಕಳ್ಳನನ್ನು ಆತ ಸಾಯಿಸಿದ ಸೊಳ್ಳೆಯಿಂದಲೇ ಪೊಲೀಸರು ಪತ್ತೆಹಚ್ಚಿದ್ದಾರೆ. ಕೇಳಲು ತಮಾಷೆ ಅನಿಸಿದರೂ ಇದೊಂದು ಪೊಲೀಸರ ತಲೆಕೆಡಿಸಿದ ಪ್ರಕರಣವಾಗಿದೆ. ಈ ಘಟನೆ ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ನಡೆದಿದೆ.
ಪೂರ್ವ ಚೀನಾದ ಫುಜಿಯಾನ್ ಪ್ರಾಂತ್ಯದ ಫುಝೌನಲ್ಲಿನ ಅಪಾರ್ಟ್ಮೆಂಟ್ವೊಂದಕ್ಕೆ ಕಳ್ಳನು ನುಗ್ಗುತ್ತಾನೆ. ಆದರೆ ಕಳ್ಳತನವಾಗಿರುವುದು ನಿಜವಾದರೂ ಕಳ್ಳನ ಒಂದೇ ಒಂದು ಸುಳಿವು ಪೊಲೀಸರಿಗೆ ಸಿಕ್ಕಿರುವುದಿಲ್ಲ. ಆದರೆ ಪೊಲೀಸರ ಅನುಮಾನದಂತೆ ಕಳ್ಳ ರಾತ್ರಿ ಆ ಕೋಣೆಯಲ್ಲೇ ತಂಗಿದ್ದಾನೆ. ಬಾಲ್ಕನಿ ಮತ್ತು ಮನೆಯ ಕೋಣೆಯೊಳಗಡೆ ಸುತ್ತಾಡಿದ್ದಾನೆ. ಆದರೆ ರಾತ್ರಿ ವೇಳೆ ಕೋಣೆಯಲ್ಲಿ ಸೊಳ್ಳೆಯ ಉಪಟಳವಿತ್ತು. ಹಾಗಾಗಿ ಗೋಡೆಯ ಬಳಿ ಬಂದ ಸೊಳ್ಳೆಯನ್ನು ಕಳ್ಳ ಕೊಂದಿದ್ದಾನೆ. ಈ ವೇಳೆ ಸೊಳ್ಳೆ ಗೋಡೆಯಲ್ಲೇ ಅಂಟಿಕೊಟ್ಟಿತ್ತು. ಮಾತ್ರವಲ್ಲದೆ, ರಕ್ತದ ಕಲೆಯೂ ಗೋಡೆಯಲ್ಲಿ ಅಂಟಿತ್ತು.
ನತದೃಷ್ಟವೋ ಏನೂ ಗೋಡೆಗೆ ಅಂಟಿದ್ದ ರಕ್ತದ ಕಲೆಯು ತನಿಖಾಧಿಕಾರಿಗಳ ಕಣ್ಣಿಗೆ ಬಿತ್ತು. ಇದರ ಮೂಲಕ ಡಿಎನ್ಎಗಾಗಿ ರಕ್ತವನ್ನು ಪರೀಕ್ಷಿಸಲು ನಿರ್ಧರಿಸಿದರು. ರಕ್ತವನ್ನು ಡಿಎನ್‌ಎ ಪರೀಕ್ಷೆ ಒಳಪಡಿಸಿದ ನಂತರ. ರಕ್ತವು ಚಾಯ್ ಎಂಬ ವ್ಯಕ್ತಿಗೆ ಸೇರಿದೆ ಎಂದು ತಿಳಿದುಬರುತ್ತದೆ. ಆತ ಸಾಕಷ್ಟು ಕ್ರಿಮಿನಲ್ ಕೇಸ್ಗಳನ್ನು ಹೊಂದಿದ್ದನು ಎಂದು ತಿಳಿದು ಬಂದಿದೆ.
ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದೇ ಕಳ್ಳತನವಾದ 19 ದಿನಗಳ ನಂತರ ಚಾಯ್ ಸಿಕ್ಕಿಬಿದ್ದಿದ್ದಾನೆ, ಬಳಿಕ ಚಾಯ್‌ನನ್ನು ವಿಚಾರಣೆ ನಡೆಸಲಾಯಿತು. ಕಳ್ಳತನವನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ.