ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

ಭಾರತದ ಸ್ಟಾರ್ ಕ್ರೀಡಾಪಟು ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ, ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ  ಪಡೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ದಾಖಲೆ ಬರೆದಿದ್ದಾರೆ.

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಬಳಿಕ ಇವರು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಾಮನ್​ವೆಲ್ತ್​ ಗೇಮ್ಸ್​ನಿಂದ ಕೂಡ ಹೊರಗುಳಿಯ ಬೇಕಾಯಿತು. ಇದೀಗ ಸ್ವಿಸ್​​ನ ಡೈಮಂಡ್​ ಲೀಗ್​ನಲ್ಲಿ 89.08 ಮೀಟರ್​ ದೂರ ಜಾವೆಲಿನ್​ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿಕೊಂಡಿದ್ದಾರೆ.

ಗೆಲುವಿನೊಂದಿಗೆ ನೀರಜ್ ಚೋಪ್ರಾ ಸೆಪ್ಟೆಂಬರ್ 7 ಮತ್ತು 8 ರಂದು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, 2023 ರ ವಿಶ್ವ ಚಾಂಪಿಯನ್‌ಶಿಪ್‌ಗೆ ನೀರಜ್ ಅರ್ಹತೆ ಪಡೆದಿದ್ದಾರೆ. ಅವರ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮೂಡಿಬಂತು. ಜೇಕಬ್‌ ವಾಡ್ಲೆಚ್‌ (85.88 ಮೀ.) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಕರ್ಟಿಸ್‌ ಥಾಂಪ್ಸನ್‌ (83.72 ಮೀ.) ಮೂರನೇ ಸ್ಥಾನ ಗಳಿಸಿದರು.

ಗೆದ್ದ ಬಳಿಕ ಮಾತನಾಡಿದ ನೀರಜ್, “ಈ ಫಲಿತಾಂಶದಿಂದ ಖುಷಿಯಾಗಿದೆ. ಗಾಯದಿಂದ ಚೇತರಿಸಿಕೊಂಡು 89 ಮೀಟರ್​ ಎಸೆದಿರುವುದು ಸಂತಸ ತಂದಿದೆ. ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಬೇಕಾಯಿತು. ಇದು ನನ್ನನ್ನು ಸ್ವಲ್ಪ ಆತಂಕಕ್ಕೀಡು ಮಾಡಿತ್ತು. ಇದೀಗ ನಾನು ವಾಪಸ್​ ಆಗಿದ್ದೇನೆ” ಎಂದು ಹೇಳಿದರು.

ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ ಅವರು ಎರಡನೇ ಸ್ಥಾನ ಪಡೆದದ್ದು, ಡೈಮಂಡ್‌ ಲೀಗ್‌ನಲ್ಲಿ ಭಾರತದ ಅಥ್ಲೀಟ್‌ವೊಬ್ಬರ ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು. ವಿಕಾಸ್‌ ಅವರು 2012 ರ ನ್ಯೂಯಾರ್ಕ್‌ ಮತ್ತು 2014ರ ದೋಹಾ ಕೂಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. 2015 ರಲ್ಲಿ ಶಾಂಘೈ ಮತ್ತು ಯೂಜಿನ್‌ ಕೂಟಗಳಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

Leave A Reply

Your email address will not be published.