ಆತನನ್ನು ಬಂಧಿಸಲು ಲೈಂಗಿಕ ಆಕರ್ಷಣೆ !! ಆಕೆಯ ಮೂತ್ರದ ವಾಸನೆಯ ಮೋಹಕ್ಕೆ ಆಗಂತುಕ ಆಗುತ್ತಾನೆಯೇ ಲಾಕ್ ?!

ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟು ಅಧಿಕಾರಿಗಳ ಸಹಿತ ಜನತೆಯ ನೆಮ್ಮದಿಯನ್ನು ಆತ ಹಾಳುಗೆಡವಿದ್ದ. ಏನೆಲ್ಲಾ ಪ್ರಯತ್ನ ಪಟ್ಟರೂ ಆತ ಚಿರತೆಯ ವೇಗದಲ್ಲಿ ಪ್ರತ್ಯಕ್ಷ ಆಗಿ ಮಿಂಚಿನಂತೆ ಮರೆಯಾಗಿ ಬಿಡುತ್ತಿದ್ದ. ತಮ್ಮಲ್ಲಿ ಇರುವ ಎಲ್ಲಾ ಟೆಕ್ನಾಲಜಿಯನ್ನು ತಂತ್ರಗಳನ್ನು ಬಳಸಿ ಬೆಂಡಾದ ಪೋಲಿಸರಿಗೆ ಕೊನೆಗೂ ಹೊಳೆದಿತ್ತು ಒಂದು ರಸಿಕ ಐಡಿಯಾ !! ಅದು ಆಪರೇಶನ್ ಹನಿಟ್ರಾಪ್ !!!

 

ಈಗಾಗಲೇ ಎಂಟು ಕಡೆಗಳಲ್ಲಿ ನಾಕಾಬಂದಿ ಮಾಡಲಾಗಿದೆ. ಆದರೂ ಹುಷಾರಿ ಕ್ರಿಮಿನಲ್ ಸೆರೆ ಸಿಕ್ಕಿಲ್ಲ. ಆಗ ಸುಂದರ ಹೆಣ್ಣೊಬ್ಬಳ ಮೂತ್ರದ ಸ್ಯಾಂಪಲ್ ಅನ್ನು ಪೋಲೀಸರು ಅದೆಲ್ಲಿಂದಲೋ ಕಡ ತಂದಿದ್ದಾರೆ. ಈ ಸಾರಿ ಬಲಿ ಗ್ಯಾರಂಟಿ ಎನ್ನುವ ಕಾನ್ಫಿಡೆನ್ಸ್ ನಲ್ಲಿ ಪೊಲೀಸರು ಇದ್ದಾರೆ. ನಿಜಕ್ಕೂ ಆತ ಆಕೆಯ ದೇಹ ದ್ರವ್ಯದ ಘಮ ಅರಸುತ್ತಾ ಸಮಾಗಮದ ಸಂಭ್ರಮವನ್ನು ಮೆಲುಕು ಹಾಕುತ್ತಾ ಬರ್ತಾನಾ ? ಪೋಲೀಸರು ಒಡ್ಡಿದ ಹನಿ ಟ್ರಾಪ್ ಗೆ ಬೀಳ್ತಾನಾ ?! ಬೆಳಗಾವಿಯ ಜನ ಕಾತರದಿಂದ ಕಾದು ಕೂತಿದ್ದಾರೆ.

ಇದು ಬೆಳಗಾವಿ ಸುತ್ತ ಕಾಣಿಸಿಕೊಂಡ ಚಿರತೆಯೊಂದರ ಬಂಧನದ ಕಥೆ. ಆ ಪುಂಡ ಚಿರತೆಯನ್ನು ಬಲೆಗೆ ಹಾಕಲು ಬೋನು ಇರಿಸಲಾಗಿದ್ದು, ಬೋನಿನ ಸುತ್ತಲೂ ಈಗ ಹೆಣ್ಣು ಚಿರತೆಯ ಮೂತ್ರ ಸಿಂಪಡಿಸಲಾಗಿದೆ. ಹೆಣ್ಣು ಚಿರತೆಯ ಮೂತ್ರದ ವಾಸನೆಗೆ ಗಂಡು ಚಿರತೆ ಲೈಂಗಿಕ ಆಕರ್ಷಣೆಗೊಂಡು, ಮೂಗಿನ ಹೊಳ್ಳೆ ಅರಳಿಸಿಕೊಂದು ಅತ್ತ ಆತ ಬಂದ್ರೆ ಲಬಕ್ಕ ಅಂತ ಬೋನಿಗೆ ಬೀಳಿಸೋದು ಮನುಷ್ಯ ಹೆಣೆದ ತಂತ್ರ.

ಈ ಆಪರೇಷನ್ ನಲ್ಲಿ ಸುಮಾರು 160ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಎರಡು ಆನೆಗಳ ಸಹಿತ ಒಂದು ಜೆಸಿಬಿ, ಸಿಬ್ಬಂದಿಗಳಿಗಾಗಿ ಒಂದು ದಿನಕ್ಕೆ ಬರೋಬ್ಬರಿ 2 ರಿಂದ 3 ಲಕ್ಷ ಖರ್ಚು ಮಾಡಲಾಗುತ್ತಿದೆ.

ಹತ್ತಿರದಿಂದ ವಿಡಿಯೋ ಮಾಡಲು ಕಾಣಸಿಗುವ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಇಡೀ ಪ್ರದೇಶದ ನೆಮ್ಮದಿ ಹಾಳು ಮಾಡಿದ ಚಿರತೆ ಹೊಸ ಉಪಾಯದ ಮೂಲಕವಾದರೂ ಬೋನಿಗೆ ಬೀಳಬಹುದೇ ಎನ್ನುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.