ಚಲಿಸುತ್ತಿರುವಾಗಲೇ ಕಳಚಿ ಬಿದ್ದ ಬಸ್ಸಿನ ಎರಡೂ ಚಕ್ರ | ಸ್ವಲ್ಪದರಲ್ಲೇ ತಪ್ಪಿದ ದುರಂತ
ಇಲ್ಲಿ ನಾವು ಹೇಳ ಹೊರಟಿರುವುದು ಸರಕಾರದ ಸಂಪೂರ್ಣ ನಿರ್ಲಕ್ಷ್ಯದ ಪರಮಾವಧಿಯ ಹಂತದ ಘಟನೆಯನ್ನು. ಏಕೆಂದರೆ ಸರಕಾರಿ ಬಸ್ಸೊಂದು ಚಲಿಸುತ್ತಿರುವಾಗಲೇ ನಡೆದ ಅಚಾತುರ್ಯ ಇದು. ಇಲ್ಲಿ ನಿಜಕ್ಕೂ ತುಂಬಾ ಜನರ ಸಾವು ಸಂಭವಿಸಬಹುದಿತ್ತು. ಆದರೆ ಅದೃಷ್ಟವಶಾತ್ ಅಂಥಹ ಯಾವುದೇ ಸಂಭವ ನಡೆಯಲಿಲ್ಲ.
ಚಲಿಸುತ್ತಿರುವಾಗಲೇ ಸರ್ಕಾರಿ ಬಸ್ಸಿನ 2 ಚಕ್ರಗಳೂ ಕಳಚಿ ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪ ನಿನ್ನೆ(ಗುರುವಾರ) ನಡೆದಿದೆ. ಇತಿಹಾಸದಲ್ಲಿ ಬಸ್ಸಿನ ಚಕ್ರಗಳು ಈ ರೀತಿ ಉರುಳಿ ಹೋಗಿರಲಿಲ್ಲ ಎಂದು ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಇದೊಂದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೆಂದೇ ಹೇಳಬಹುದು.
ಬಹುಶಃ ಸರ್ಕಾರಿ ಬಸ್ಸಿನ ಇಂತಹ ಅಚಾತುರ್ಯ ಇದೇ ಮೊದಲು ಅನ್ಸುತ್ತೆ. ಚಲಿಸುತ್ತಿದ್ದಾಗಲೇ ಬಸ್ಸಿನ 2 ಚಕ್ರಗಳು ಏಕಕಾಲದಲ್ಲಿ ಕಳಚಿ ಬಿದ್ದಿದ್ದು, ನಿಜಕ್ಕೂ ಆಘಾತಕಾರಿ ವಿಷಯ. ವೀಲ್ ಬಾಡಿ ಸಮೇತ ಹಿಂದಿನ 2 ಚಕ್ರಗಳು ಉರುಳಿ ಹೋಗಿವೆ.
ಹಾಸನ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಬಸ್ಸನ್ನು ಡ್ರೈವರ್ ಸ್ಲೋ ಆಗಿ ಓಡಿಸುತ್ತಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಸ್ವಲ್ಪ-ಹೆಚ್ಚು ಕಡಿಮೆಯಾಗಿದ್ದರೂ ಸರ್ಕಾರ ಭಾರೀ ಬೆಲೆ ತೆರಬೇಕಾಗಿತ್ತು.