ಪುತ್ತೂರು : ಶತಮಾನ ಪೂರೈಸಿದ ಕಾಲೇಜಿನ ಸುತ್ತ ಎಚ್ಚರಿಕೆಯ ಘಂಟೆ!! ಅಕ್ಷರ ದೇಗುಲದ ಉಳಿವಿಗೆ ಮನವಿ-ನಾಲ್ಕು ವರ್ಷಗಳಿಂದ ಹುಸಿಯಾದ ಭರವಸೆ!
ಪುತ್ತೂರು: ಶತಮಾನ ಪೂರೈಸಿ, ಜಿಲ್ಲೆಯಲ್ಲೇ ಗರಿಷ್ಠ ವಿದ್ಯಾರ್ಥಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಕ್ಷಣ ಸಂಸ್ಥೆಯೊಂದು ಅಪಾಯದಲ್ಲಿದ್ದು, ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನವಿ ಸಲ್ಲಿಕೆಯಾಗಿದ್ದರೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.
ಇದು ಪುತ್ತೂರು ನಗರದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ಈಗಾಗಲೇ ಕಾಲೇಜಿನ ಹಳೆಯ ಕಟ್ಟಡ ಕುಸಿತದ ಭೀತಿಯಲ್ಲಿದ್ದು, ಈ ಮಧ್ಯೆ ಕಟ್ಟಡದ ಪಕ್ಕದಲ್ಲೇ ಇರುವ ತಾಲ್ಲೂಕು ಕ್ರೀಡಾಂಗಣವು ಸೂಕ್ತ ನಿರ್ವಹಣೆಯ ಕೊರತೆಯಿಂದ ಮಳೆ ನೀರಿಗೆ ಕೊಚ್ಚಿ ಹೋಗಿ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ.
ಪುತ್ತೂರಿನ ಕೊಂಬೆಟ್ಟು ಕಾಲೇಜಿಗೆ ಸುಮಾರು ನಾಲ್ಕೈದು ವರ್ಷಗಳಿಂದ ಈ ಸಂಕಷ್ಟ ಎದುರಾಗಿದ್ದು, ಕ್ರೀಡಾಂಗಣದ ಮಣ್ಣು ಸವೆದು ಕಾಲೇಜು ಕಟ್ಟಡಕ್ಕೆ ಅಪಾಯ ಎದುರಾಗುತ್ತಿರುವುದರ ಕುರಿತು ಕಾಲೇಜಿನ ಪ್ರಾಂಶುಪಾಲರು ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗಳ ಸಹಿತ ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದು, ಇಂದೋ ನಾಳೆಯೋ ಸರಿಯಾಗುತ್ತದೆ ಎನ್ನುವ ಭರವಸೆ ನಾಲ್ಕು ವರ್ಷಗಳಿಂದ ಹುಸಿಯಾಗಿದೆ.
ಅತ್ತ ಇಲಾಖೆ, ಜನಪ್ರತಿನಿದಿಗಳ ಕಚೇರಿ ಸೇರಿದ ಮನವಿಗಳು ಗೆದ್ದಲು ಹಿಡಿಯುವ ಮಟ್ಟಕ್ಕೆ ತಲುಪಿದ್ದರೂ ಯಾವುದೇ ಸ್ಪಂದನೆ ದೊರಕದಿರುವುದು ಬೇಸರದ ಸಂಗತಿಯಾಗಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತುರ್ತು ಸ್ಪಂದನೆ ದೊರಕಿದ್ದರೂ ಆ ಬಳಿಕದ ಸರ್ಕಾರ ಬದಲಾವಣೆ, ರಾಜಕೀಯ ಮೇಲಾಟಗಳಿಂದ ಕಾಲೇಜಿನ ಸಮಸ್ಯೆಗೆ ಪರಿಹಾರ ದೊರಕದೆ ಮುಖ್ಯಮಂತ್ರಿಯ ಆದೇಶ ಹಳ್ಳ ಹಿಡಿದಿತ್ತು.
ಸದ್ಯ ಕಾಲೇಜಿನ ಮೂರು ಕೊಠಡಿಗಳು ಬಿರುಕು ಬಿಟ್ಟಿದ್ದು, ವಿದ್ಯಾರ್ಥಿಗಳು ಭಯದಿಂದಲೇ ತರಗತಿಯಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ.ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಮೆಚ್ಚಿದ ಜನಪ್ರತಿನಿದಿಗಳು ಸ್ಪಂದಿಸದೇ ಇದ್ದಲ್ಲಿ ಅನಾಹುತಕ್ಕೆ ನೇರಹೊಣೆಗಾರರು ನೀವುಗಳಾಗುತ್ತೀರಿ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯರು.