ಕುಂದಾಪುರದ ಫ್ಲೈಓವರ್ ನಲ್ಲೇ ಪ್ರವಹಿಸುತ್ತಿದೆ ವಿದ್ಯುತ್!
ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಹಾದು ಹೋಗಿರುವ ಫ್ಲೈಓವರ್ನಲ್ಲಿ ಅಸಮರ್ಪಕ ಕಾಮಗಾರಿಯಿಂದಾಗಿ ವಿದ್ಯುತ್ ಪ್ರವಹಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಪ್ಲೈ ಓವರ್ ದಾರಿ ದೀಪಗಳಿಗೆ ಸಂಪರ್ಕಿಸಲಾದ ವಿದ್ಯುತ್ ಹೆದ್ದಾರಿ ಮೇಲೆ ವಿದ್ಯುತ್ ಪ್ರವಹಿಸುತ್ತಿದೆ. ಫ್ಲೈವರ್ ಅಂಚಿನ ಗೋಡೆ ಮೇಲೆ ಟೆಸ್ಟರ್ ಇಟ್ಟು ಪರೀಕ್ಷಿಸಿದರೆ ವಿದ್ಯುತ್ ಪ್ರವಾಹ ಇರುವುದು ದೃಢಪಟ್ಟಿದೆ.
ದಾರಿದೀಪಕ್ಕೆ ನೀಡಲಾಗಿರುವ ವಿದ್ಯುತ್ ಸಂಪರ್ಕ ಸೋರಿಕೆ ಆಗುತ್ತಿರುವುದರಿಂದ ಮಳೆ ನೀರಿನ ಕಾರಣಕ್ಕೆ ಫ್ಲೈ ಓವರ್ನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಸಾರ್ವಜನಿಕರು ಈ ಬಗ್ಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು, ಅವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
ಕುಂದಾಪುರದ ಪ್ಲೈಓವರ್ ನಲ್ಲಿ ವಿದ್ಯುತ್ ಪ್ರವಹಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ. ರಾತ್ರಿ ಇಬ್ಬರು ವ್ಯಕ್ತಿಗಳು ಈ ಪ್ರಾತ್ಯಕ್ಷಿಕೆ ಮಾಡಿ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಭಾರಿ ಅವಘಡ ತಪ್ಪಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ನವಯುಗ ಕಂಪನಿಯ ಉಪ ವಿಭಾಗಾಧಿಕಾರಿ ಕೆ. ರಾಜು. ತಿಳಿಸಿದ್ದಾರೆ.
ಹಲವು ವರ್ಷಗಳು ತೆಗೆದುಕೊಂಡ ಈ ಪ್ಲೈಓವರ್ ಕಾಮಗಾರಿ ಕೊನೆಗೂ ಜನರ ಒತ್ತಡ ಪ್ರತಿಭಟನೆಗೆ ಮಣಿದು ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ಬಳಿಕ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕವೂ ದಾರಿದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಸಾರ್ವಜನಿಕರ ಹೋರಾಟದ ಬಳಿಕ ತರಾತುರಿಯಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಆದರೆ, ಇದೀಗ ಫ್ಲೈ ಓವರ್ ಮೇಲೆ ವಿದ್ಯುತ್ ಪ್ರವಹಿಸುತ್ತಿದೆ.