ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ | ಕ್ರೂಸರ್ ಗೆ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವು, 14 ಜನರಿಗೆ ತೀವ್ರ ಗಾಯ
ಭೀಕರ ಅಪಘಾತವೊಂದು ರಾಜ್ಯದಲ್ಲಿ ನಡೆದಿದ್ದು, ಈ ಅಪಘಾತದ ತೀವ್ರತೆಗೆ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ತುಮಕೂರಿನಲ್ಲಿ ನಡೆದಿದೆ. ಕ್ರೂಸರ್ ಗೆ ಲಾರಿ ಡಿಕ್ಕಿಯಾಗಿ 9 ಜನ ಸಾವಿಗೀಡಾಗಿ, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ಕ್ರೂಸರ್ ಲಾರಿ ಡಿಕ್ಕಿಯಾಗಿದ್ದು, ಮೃತರು ರಾಯಚೂರು ಜಿಲ್ಲೆಯವರಾಗಿದ್ದು, ಕ್ರೂಸರ್ ನಲ್ಲಿ 20 ಜನರ ಪೈಕಿ 9 ಜನರು ಮೃತಪಟ್ಟಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರಾದವರಲ್ಲಿ 2 ಮಕ್ಕಳು, 3 ಮಂದಿ ಮಹಿಳೆಯರು, 4 ಮಂದಿ ಪುರುಷರು ಸೇರಿದ್ದಾರೆ.
ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ 9 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ 14 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಬಡ ಕಾರ್ಮಿಕರು ಕ್ರೂಸರ್ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಕಳ್ಳಂಬೆಳ್ಳ ಚೆಕ್ಪೋಸ್ಟ್ ಹಾಗೂ ಟೋಲ್ ಬಳಿ ಪದೇಪದೆ ಇಂಥ ಅಪಘಾತಗಳು ಸಂಭವಿಸುತ್ತಿರುತ್ತದೆ.
ಈ ಅಪಘಾತದ ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಗೃಹ ಹಾಗೂ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಅರಗ ಜ್ಞಾನೇಂದ್ರ ಅವರು, ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಮೃತರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇದೊಂದು ಅತ್ಯಂತ ದುರಾದೃಷ್ಟಕರ ಘಟನೆ ಎಂದಿದ್ದಾರೆ.
ತುಮಕೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದು, ಗಾಯಾಳುಗಳಿಗೆ, ಸೂಕ್ತ ಚಿಕಿತ್ಸೆ ಒದಗಿಸಲು, ನಿರ್ದೇಶನ ನೀಡಲಾಗಿದೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.