ವಾಟ್ಸಪ್ ನಲ್ಲಿ ಕೇವಲ ಒಂದು ಕ್ಲಿಕ್ ಮಾಡಿದ್ರಿಂದ ಹೋಯ್ತು 21 ಲಕ್ಷ ರೂ!
ದಿನೇ ದಿನೇ ವಂಚಕರ ಸಂಖ್ಯೆ ಏರುತ್ತಲೇ ಇದೆ. ಟೆಕ್ನಾಲಜಿ ಹೆಚ್ಚುತ್ತಾ ಹೋದಂತೆ ಕಿರಾತಕರ ಕೈ ಚಳಕವು ಹೆಚ್ಚುತ್ತಲೇ ಇದೆ. ಸೈಬರ್ ಕ್ರೈಂ ನಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು, ಇದೀಗ ಇದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿಕೊಂಡಿದೆ. ಹೌದು. ವಾಟ್ಸಪ್ ನಲ್ಲಿ ಬಂದ ಒಂದು ಲಿಂಕ್ ಕ್ಲಿಕ್ ಮಾಡಿ 21 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪಟ್ಟಣದ ರೆಡ್ಡಿಪ್ಪನಾಯ್ಡು ಕಾಲೋನಿಯ ನಿವಾಸಿ ವರಲಕ್ಷ್ಮಿ, ತನಗೆ ನಡೆದ ಸೈಬರ್ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದು, ‘ಹಣವನ್ನು ಕಡಿತಗೊಳಿಸಲಾಗಿದೆ’ ಎಂಬ ಸಂದೇಶಗಳು ನಿರಂತರವಾಗಿ ಬರುತ್ತಿವೆ ಅಂತ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಆ ವೇಳೆ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅವರ ಖಾತೆಯಿಂದ 21 ಲಕ್ಷ ರೂ.ಗಳನ್ನು ಕಳುವು ಮಾಡಿರುವುದು ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ವರಲಕ್ಷ್ಮಿ, ಶನಿವಾರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ಅಪರಾಧಿಗಳು ವಾಟ್ಸಾಪ್ ಸಂಖ್ಯೆಗಳಿಗೆ ಲಿಂಕ್ ಗಳನ್ನು ಕಳುಹಿಸುತ್ತಿದ್ದಾರೆ. ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಮತ್ತು ಅವರ ಮೂಲಕ ಹಣವನ್ನು ಕದಿಯುತ್ತಿದ್ದಾರೆ ಅಂತ ಟೌನ್ ಸರ್ಕಲ್ ಇನ್ಸ್ಪೆಕ್ಟರ್ ಮುರಳೀಕೃಷ್ಣ ಹೇಳಿದ್ದಾರೆ.