DOUBLE BREAKING | ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಕ್ರೀಡಾಕೂಟದ ವೇಳೆ ಗಲಾಟೆ -ಇಬ್ಬರು ಅರೆಸ್ಟ್ , ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮತ್ತೆ ವಿಸ್ತರಣೆ !
ಶಿವಮೊಗ್ಗ: ಜಿಲ್ಲೆಯ ಶಿರಾಳಕೊಪ್ಪದಲ್ಲಿ ಇಂದು ನಡೆಯುತ್ತಿದ್ದಂತ ವಲಯ ಮಟ್ಟದ ಕ್ರೀಡಾಕೂಟದ ವೇಳೆಯಲ್ಲಿ ಕ್ರೀಡಾಕೂಟ ನೋಡೋದಕ್ಕೆ ಆಗಮಿಸಿದ್ದಂತ ಅನ್ಯಕೋಮಿನ ಎರಡು ಗುಂಪಿನ ನಡುವೆ ಗಲಾಟೆ ನಡೆದು, ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕಃ- 22-08-2022 ರಂದು ಮದ್ಯಾಹ್ನ ಶಿಕಾರಪುರದ ಮಂಚಿನಕೊಪ್ಪ ಗ್ರಾಮದ ವಾಸಿಯಾದ ಅಣ್ಣಪ್ಪ, 20 ವರ್ಷ ಈತನು ಶಿರಾಳಕೊಪ್ಪ ಟೌನ್ ನ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟದ ವಾಲೀ ಬಾಲ್ ಪಂದ್ಯಾವಳಿಯನ್ನು ನೋಡುತ್ತಿದ್ದಾಗ, ಯಾರೋ ಒಬ್ಬ ವ್ಯಕ್ತಿಯು ಅಡ್ಡಲಾಗಿ ಚೇರನ್ನು ಹಾಕಿಕೊಂಡು ಕುಳಿತಿದ್ದು, ಆಗ ಆತನಿಗೆ ಪಂದ್ಯಾವಳಿಯು ಕಾಣುತ್ತಿಲ್ಲ ಪಕ್ಕಕ್ಕೆ ಸರಿ ಎಂದು ಹೇಳಿದಾಗ ಆ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ಬೈದು ಕಪ್ಪಾಳಕ್ಕೆ ಹೊಡೆದಿರುತ್ತಾನೆ. ಆಗ ಅಣ್ಣಪ್ಪನ ಜೊತೆಗಿದ್ದ ಮಂಚಿನ ಕೊಪ್ಪ ಗ್ರಾಮದ ಇತರರು ಸೇರಿ ಜಗಳವನ್ನು ಬಿಡಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ನಂತರ ಅಣ್ಣಪ್ಪ, ಪವನ್, ಮಣಿಕಂಠ, ಪುನಿತ್, ಪ್ರಮೋದ, ಶಿವರಾಜ್ ರವರುಗಳು ತಮ್ಮ ಊರಿಗೆ ಹೋಗಲೆಂದು ಬೈಕ್ ಗಳಲ್ಲಿ ಹಿಂದಿರುಗುತ್ತಿದ್ದಾಗ, ಗಲಾಟೆ ಮಾಡಿದ ವ್ಯಕ್ತಿಯು ತನ್ನೊಂದಿಗೆ 1) ಪರ್ವೀಜ್, 26 ವರ್ಷ, ಶಿರಾಳಕೊಪ್ಪ, 2) ಜಬೀವುಲ್ಲಾ, 23 ವರ್ಷ, ಶಿರಾಳಕೊಪ್ಪ ಟೌನ್ ಮತ್ತು 3) ಶಕೀಲ್, 30 ವರ್ಷ, ಶಿರಾಳಕೊಪ್ಪ ಟೌನ್ ಮತ್ತು ಇತರರನ್ನು ತನ್ನ ಜೊತೆ ಕರೆದುಕೊಂಡು ಬಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಕೆ ರಸ್ತೆಯ ಹೊಂಡದ ಕೆರೆ ಸರ್ಕಲ್ ನ ಹತ್ತಿರ ಇವರುಗಳನ್ನು ಅಡ್ಡಗಟ್ಟಿ, ತಾವು ತಂದಿದ್ದ ಕಲ್ಲು, ದೊಣ್ಣೆ ಮತ್ತು ರಾಡಿನಿಂದ ಅಣ್ಣಪ್ಪ ಮತ್ತು ಆತನ ಜೊತೆಗಿದ್ದವರ ಮೇಲೆ ಹಲ್ಲೆ ಮಾಡಿ, ಜಾತಿನಿಂಧನೆ ಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಗಾಯಾಳನ್ನು ಚಿಕಿತ್ಸೆ ಸಂಬಂಧ ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ:- 0185/2022 ಕಲಂ 143, 147, 148, 504, 341, 323, 324, 506 ಸಹಿತ 149 ಐಪಿಸಿ ಮತ್ತು ಎಸ್.ಸಿ ಎಸ್.ಟಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.