ಕಡಬ :ಹಚ್ಚ ಹಸುರಿನ ಕೊಯಿಲ ಫಾರಂ ಗುಡ್ಡದ ದುರ್ಬಳಕೆ | ಚಟಗಳಿಗೆ ಬಳಕೆಯಾಗುತ್ತಿದೆ ಹಸಿರು ಹೊದಿಕೆ

ಕಡಬ: ಸಾಲು ಸಾಲು ಗುಡ್ಡಗಳಿಗೆ ಪ್ರಕೃತಿಯ ಹಚ್ಚ ಹಸಿರಿನ ಹೊದಿಕೆ,ನೋಡುಗರ ಕಣ್ಮನ ಸೆಳೆಯುವ, ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣ.ಮುಂಗಾರು ಮಳೆ ಇಳೆಗೆ ಬಿದ್ದು ತಂಪೆರೆದಾಗ ಬೆಳೆಯುವ ಹಸಿರು ಹುಲ್ಲಿನಿಂದ
ಸುಂದರವಾಗಿ ಕಂಗೋಳಿಸುವ ಕಡಬ ತಾಲೂಕು ಕೊಯಿಲ ಗ್ರಾಮದ ಕೆ.ಸಿ.ಫಾರಂ ಗುಡ್ಡಗಳು. ಇಂತಹ ಮನೋಹರ ದೃಶ್ಯ ಕಾವ್ಯದ ಪರಿಸರವನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು ಹಾಳುಗೆಡವುತ್ತಿದ್ದಾರೆ ಎನ್ನುವ ಆರೋಪ
ವ್ಯಕ್ತವಾಗುತ್ತಿದೆ.

 

ಇಲ್ಲಿನ ಗುಡ್ಡದಲ್ಲಿ ಅಲ್ಲಲ್ಲಿ ಸಿಗುವ ಖಾಲಿಯಾದ ಬೀಯರ್ ಬಾಟಲ್‌ಗಳು,ಒಡೆದ ಗ್ಲಾಸಿನ ಚೂರುಗಳು, ಇನ್ನಿತರ ಅನೈತಿಕ ಚಟುವಟಿಕೆಗೆ ಬಳಕೆಯಾಗುವ ವಸ್ತುಗಳು ಗುಡ್ಡದ ದುರ್ಬಳಕೆಯನ್ನು ತೋರಿಸುತ್ತದೆ. ಗುಡ್ಡದ
ಅಂದವನ್ನು ಸವಿಯಲು ಬರುವ ಮಂದಿ ಈಗ ರೇವು ಪಾರ್ಟಿಗೆ ಬಳಸಿಕೊಳ್ಳುತ್ತಿದ್ದಾರೆ
ಸುಮಾರು ಸಾವಿರ ಎಕ್ರೆಯಲ್ಲಿ ಹರಡಿಕೊಂಡಿರುವ ಪಶುಸಂಗೋಪನ ಇಲಾಖೆಗೆ ಸೇರಿರುವ ಜಾಗ.
ಈಗಿನ ಪರಿಸ್ಥಿತಿ ಎಲ್ಲವೂ ಆಯೋಮಯ, ಸಿಬ್ಬಂದಿ ಕೊರತೆಯಿಂದ ಎಲ್ಲವೂ ತೊಂದರೆಯಾಗಿದೆ. ದನ , ಕರು , ಎಮ್ಮೆ, ಕೋಣ , ಹಂದಿ , ಕೋಳಿ ಮುಂತಾದುವುಗಳು ಇಲ್ಲಿ ಸಾಕಲಾಗುತ್ತಿದೆ. ಕಛೇರಿ ಸುತ್ತಮುತ್ತ
ಕಟ್ಟಡಗಳು ಇವೆ ಬಳಿಕ ಎಲ್ಲವೂ ಗುಡ್ಡ ಪ್ರದೇಶಗಳು.

ಮಳೆಗಾಲ ಆರಂಭದಿಂದ ವರ್ಷಾಂತ್ಯದವರೆಗೆ ಗುಡ್ಡಗಳು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸುಂದರ
ಪರಿಸರವನ್ನು ಸವಿಯಲು ದೂರದೂರಿನಿಂದ ಜನರು ಅದರಲ್ಲೂ ಯುವ ಜನತೆ ಹೆಚ್ಚಾಗಿ ಆಗಮಿಸುತ್ತಾರೆ. ಪ್ರತಿದಿನ ಸಾಯಂಕಾಲ ಮತ್ತು ರಜಾ ದಿನಗಳಲ್ಲಿ ಜನ
ಸಂದಣಿಯಿರುತ್ತದೆ.ಗಂಡಿಬಾಗಿಲು, ಆನೆಗುಂಡಿ ಮೊದಲಾದೆಡೆ ಹಾಕಲಾದ ಬೇಲಿಯನ್ನೆ ಕಿತ್ತು ಒಳ
ಪ್ರವೇಶಿಸುತ್ತಾರೆ.

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ
ಗೊಕುಲನಗರ ಎಂಬಲ್ಲಿ ಇಲಾಖಾ ಜಾಗಕ್ಕೆ ಪ್ರವೇಶ ದ್ವಾರವೊಂದಿದೆ ಇದು ಸದಾ ತೆರದಿರುತ್ತೆ.
ರಜಾ ದಿನಗಳಲ್ಲಿ ದೂರದೂರಿನ ಯುವ ಜನತೆ ಮೋಜುಮಸ್ತಿಗೆ ಗುಡ್ಡಗಳಿಗೆ ಆಗಮಿಸುತ್ತಾರೆ . ತಾವು ಬಂದ ವಾಹನಗಳನ್ನು ಎಲ್ಲೆಂದರಲ್ಲಿ
ನಿಲ್ಲಿಸುತ್ತಾರೆ, ತಿಂಡಿ ಪೊಟ್ಟಣಗಳನ್ನು ಎಲ್ಲಂದರಲ್ಲಿ ಬಿಸಾಡುತ್ತಾರೆ, ಕುಡಿದು ಮದ್ಯ
ಬಾಟಲಿಗಳನ್ನು ಹುಡಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ, ಫಾರಂನ
ಬಳಿಕೆಯಲ್ಲಿರುವ ನೀರಿನ ಟ್ಯಾಂಕಿಗಳಿಗೆ ಕಸಕಡ್ಡಿಗಳನ್ನು ಹಾಕುತ್ತಾರೆ.

ಪ್ರಶ್ನಿಸಲು ಹೋದ ಸಿಬ್ಬಂದಿಯನ್ನು ದಬಾಯಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಈ ಭಾಗದಲ್ಲಿ ನಡೆದಾಡುವ ಮಹಿಳೆಯರು, ಮಕ್ಕಳು, ಸಭ್ಯ ಜನರಿಗೆಅಸಹ್ಯವೆನಿಸಿದೆ ಎಂದು ಆರೋಪಿಸುತ್ತಾರೆ .

ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ,
ಕೊಯಿಲ, ವಳಕಡಮ ಸರ್ಕಾರಿ ಶಾಲೆಗಳನ್ನು , ಪ್ರಮುಖ ಪೇಟೆಗಳನ್ನು ಸಂಪರ್ಕಿಸಲು ನೂರಾರು ಮಂದಿ ಇಲಾಖಾ ಜಾಗದ ಮೂಲಕ ಹಾದು ಹೋಗಿರುವ
ದಾರಿಗಳನ್ನು , ರಸ್ತೆಯನ್ನು ಜನತೆ ಆಶ್ರಯಿಸಿದ್ದಾರೆ. ಪೊಲೀಸರು ಇಲಾಖೆಯ ಸಿಬ್ಬಂದಿಗಳು ಇತ್ತ ಗಮನಹರಿಸಬೇಕು ಎಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.

Leave A Reply

Your email address will not be published.