ಮಂಗಳೂರು : ಮತ್ತೆ ಭುಗಿಲೆದ್ದ ‘ಹಿಜಾಬ್’ ವಿವಾದ | ಕಾಲೇಜಿನಿಂದ ಶೇ.16 ವಿದ್ಯಾರ್ಥಿನಿಯರಿಂದ ಟಿಸಿ ವಾಪಾಸ್!!!
ಮಂಗಳೂರು : ಅಂತೂ ಇಂತೂ ಅಲ್ಪ ಮಟ್ಟಿಗೆ ತಣ್ಣಗಾಗಿದ್ದ ಹಿಜಾಬ್ ವಿವಾದ ಈಗ ಮತ್ತೆ ಶುರುವಾಗಿದೆ. ಹೈಕೋರ್ಟ್ ಆದೇಶ ನೀಡಿದ ನಂತರ, ಬುರ್ಖಾಗೆ ಮತ್ತೆ ಅವಕಾಶವಿಲ್ಲವೆಂದರೂ, ಕಾಲೇಜಿನಿಂದ ಶೇ.16 ರಷ್ಟು ವಿದ್ಯಾರ್ಥಿನಿಯರು ಟಿಸಿ ವಾಪಾಸ್ ಪಡೆದ ಘಟನೆ ನಡೆದಿದೆ.
ಹಿಜಾಬ್ ವಿವಾದದಿಂದಾಗಿ ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಗೂ ಗೈರುಹಾಜರಾಗಿದ್ದರು. ಹಾಗಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಶೇ.16 ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿಯನ್ನು ಹಿಂಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಮಾತನಾಡಿ, ಟಿಸಿ ಪಡೆಯಬಹುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ 900 ವಿದ್ಯಾರ್ಥಿನಿಯರ ಪೈಕಿ 145 ಮಂದಿ ಟಿಸಿಯನ್ನು ಹಿಂಪಡೆದಿದ್ದಾರೆ. ಅದರಲ್ಲಿ ಸರ್ಕಾರಿ ಕಾಲೇಜಿನ 34%, ಅನುದಾನಿತ ಕಾಲೇಜಿನ 13% ವಿದ್ಯಾರ್ಥಿನಿಯರು ಸೇರಿದ್ದಾರೆ.
ಹಿಜಬ್ ಧರಿಸಲು ಅವಕಾಶ ಇಲ್ಲದ ಕಾರಣ ಮಂಗಳೂರಿನ ಹಿಜಬ್ ಹೋರಾಟಗಾರ್ತಿ ಗೌಸಿಯಾ ಕಾಲೇಜಿನಿಂದ ಟಿಸಿ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿ, ವಿದ್ಯಾರ್ಥಿನಿಯರು ಟಿಸಿ ಪಡೆಯಲು ಸಚಿವ ಬಿ.ಸಿ ನಾಗೇಶ್ ಅವರೇ ಮುಖ್ಯ ಕಾರಣರಾಗಿದ್ದಾರೆ. ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.