ರಾಜ್ಯದ ಈ ಜಿಲ್ಲೆಯಲ್ಲಿ 5 ದಿನ ನಿಷೇಧಾಜ್ಞೆ ಮುಂದುವರಿಕೆ!!!
ಎರಡು ಗುಂಪುಗಳ ಮಾರಾಮಾರಿ ನಡೆದು ಓರ್ವನ ಸಾವು ನಡೆದಿತ್ತು. ಹಾಗಾಗಿ ಉದ್ವಿಗ್ನ ಸ್ಥಿತಿಯಲ್ಲಿದ್ದ ಕೊಪ್ಪಳ ಜಿಲ್ಲೆಯ ಹುಲಿಹೈದರ್ ಗ್ರಾಮದಲ್ಲಿ ಸೆ. 144 ಜಾರಿ ಮಾಡಲಾಗಿತ್ತು. ಈಗ ಅದನ್ನು ಮತ್ತೆ ಮುಂದುವರಿಸಲಾಗಿದೆ.
ಹುಲಿಹೈದರ್ ಗ್ರಾಮದಲ್ಲಿ ಇಂದಿನಿಂದ ಮತ್ತೆ ಐದು ದಿನ ನಿಷೇಧಾಜ್ಞೆ ಮುಂದುವರಿಸಿ ಕೊಪ್ಪಳ ಉಪವಿಭಾಗ ಅಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಮತ್ತೆ ಐದು ದಿನಗಳ ಕಾಲ ಹುಲಿಹೈದರ್ ಗ್ರಾಮದ ಸುತ್ತ 2 ಕಿಮೀ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹುಲಿಹೈದರ್ ಗ್ರಾಮದಲ್ಲಿ ಆ. 11 ರಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಮಾರಾಮಾರಿಯಲ್ಲಿ ಇಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದನು.
ಹೀಗಾಗಿ ಆ. 11 ರಿಂದ 20 ರ ವರೆಗೂ 144 ಸೆಕ್ಷನ್ ಜಾರಿ ಮಾಡಲಾಗಿತ್ತು..ಇದೀಗ ಮತ್ತೆ ಹುಲಿಹೈದರ್ ಗ್ರಾಮದಲ್ಲಿ ಐದು ದಿನ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಐದು ದಿನ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ ಅಂತ ಕೊಪ್ಪಳ ಉಪವಿಭಾಗ ಅಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಮಾಹಿತಿ ನೀಡಿದ್ದಾರೆ.
ಘಟನೆ ವಿವರ : ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಸಂಭವಿಸಿದ ಮಾರಾಮಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಾಗೂ ಈ ದುರ್ಘಟನೆಯಲ್ಲಿ 6 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕೊಪ್ಪಳದಲ್ಲಿ ನಡೆದಿತ್ತು.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಯಂಕಪ್ಪ ತಳವಾರ (60), ಭಾಷಾಸಾಬ್ (22) ಎಂದು ಗುರುತಿಸಲಾಗಿದೆ. ಅಂತೆಯೇ ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಧರ್ಮಣ್ಣ ಹರಿಜನ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಿಂಸಾಚಾರ ಖಂಡಿಸಿ ಮುಸ್ಲಿಂ ಮಹಿಳೆಯರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಹೂ ತರಲು ಹೋಗಿದ್ದಾಗ ನಮ್ಮ ಹುಡುಗನಿಗೆ ಹೊಡೆದರು ಎಂದು ಹೇಳಿದ ಮಹಿಳೆಯರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಗಲಾಟೆಯ ನಂತರ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂಥ ವಾತಾವರಣ ನಿರ್ಮಾಣವಾಗಿತ್ತು.