ಮಲಗಿ ಅಶ್ಲೀಲ ಭಂಗಿಯಲ್ಲಿ ರಾಧಾ ಮತ್ತು ಕೃಷ್ಣ | ಅಶ್ಲೀಲ ಫೋಟೋ ಮಾರಾಟ, ಅಮೆಜಾನ್ ಬಾಯ್ಕಾಟ್ ಶುರು

ಕೃಷ್ಣ ಜನ್ಮಾಷ್ಮಮಿ ಹಬ್ಬದ ಸಮಯದಲ್ಲಿ ಅಮೆಜಾನ್‌ನಲ್ಲಿ ಅಶ್ಲೀಲ ರಾಧಾ – ಕೃಷ್ಣ ಪೇಂಟಿಂಗ್ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ವಿಟ್ಟರ್‌ನಲ್ಲಿ ಅಮೆಜಾನ್‌ ಬಹಿಷ್ಕರಿಸಿ ಎಂಬ ಅಭಿಯಾನ ಟ್ರೆಂಡ್‌ ಆಗುತ್ತಿದೆ. ಅಲ್ಲದೆ, ಈ ವರ್ಣಚಿತ್ರವನ್ನು ಮಾರಾಟ ಮಾಡಿದ ಇ-ಕಾಮರ್ಸ್ ದೈತ್ಯ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.

ಈ ಬಗ್ಗೆ ಅಮೆಜಾನ್ ಸಂಸ್ಥೆ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳುವಂತೆ  ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದೆ. ಈ ವಿವಾದಾತ್ಮಕ ಪೇಂಟಿಂಗ್ ಅನ್ನು ಜನ್ಮಾಷ್ಟಮಿ ಮಾರಾಟದ ಭಾಗವಾಗಿ ಎಕ್ಸೋಟಿಕ್ ಇಂಡಿಯಾ ವೆಬ್‌ಸೈಟ್‌ನಲ್ಲಿಯೂ ಮಾರಾಟ ಮಾಡಲಾಗುತ್ತಿತ್ತು. ಇನ್ನೊಂದೆಡೆ, ಬೆಂಗಳೂರು ಮೂಲದ ಮಾರಾಟಗಾರ ಇಂಕೊಲೊಜಿ ಅಮೆಜಾನ್‌ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇನ್ನು, #BoycottAmazon ಎಂಬ ಹ್ಯಾಶ್‌ಟ್ಯಾಗ್‌ ಟ್ವಿಟ್ಟರ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿದ ನಂತರ, ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಸಂಸ್ಥೆ – ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಎರಡೂ ಸಹ ವಿವಾದಾತ್ಮಕ ಪೇಂಟಿಂಗ್ ಅನ್ನು ಹಿಂತೆಗೆದುಕೊಂಡಿವೆ ಎಂದು ಹಿಂದೂ ಸಂಘಟನೆ ಟ್ವೀಟ್‌ನಲ್ಲಿ ಹೇಳಿಕೊಂಡಿದೆ. ಈ ಮಧ್ಯೆ, ಈ ಸಂಬಂಧ ಎಕ್ಸೋಟಿಕ್ ಇಂಡಿಯಾ ಕೂಡ ಕ್ಷಮೆಯಾಚಿಸಿ ಟ್ವೀಟ್ ಮಾಡಿದೆ.  “ನಮ್ಮ ವೆಬ್‌ಸೈಟ್‌ನಲ್ಲಿ ಅನುಚಿತ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ನಮ್ಮ ಗಮನಕ್ಕೆ ತರಲಾಗಿದೆ. ಅದೇ ತಕ್ಷಣವೇ ಅದನ್ನು ತೆಗೆದುಹಾಕಲಾಯಿತು. ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ, ದಯವಿಟ್ಟು ಎಕ್ಸೋಟಿಕ್ ಇಂಡಿಯಾವನ್ನು ಬಹಿಷ್ಕರಿಸಬೇಡಿ ಎಂದು ಟ್ವೀಟ್‌ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

ಈ ವಿವಾದಾತ್ಮಕ ಪೇಂಟಿಂಗ್ ಅನ್ನು ಆಗಸ್ಟ್ 18 ಮತ್ತು 19 ರಂದು ಜನ್ಮಾಷ್ಟಮಿ ಸೇಲ್‌ ಅಡಿಯಲ್ಲಿ ಎಕ್ಸೋಟಿಕ್ ಇಂಡಿಯಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟಕ್ಕಿಟ್ಟಿತ್ತು. ಜತೆಗೆ, ಕೃಷ್ಣ ಜನ್ಮಾಷ್ಮಮಿ ಹಿನ್ನೆಲೆ ರಾಧಾ – ಕೃಷ್ಣನ ಪೇಂಟಿಂಗ್ ಕೊಳ್ಳಲು ಜನ ಹುಡುಕಾಟ ನಡೆಸುತ್ತಿರುವಾಗ ಈ ವಿವಾದಾತ್ಮಕ ಪೇಂಟಿಂಗ್ ಸಹ ಕಣ್ಣಿಗೆ ಬಿದ್ದಿತ್ತು ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಎಕ್ಸೋಟಿಕ್ ಇಂಡಿಯಾ ಹಾಗೂ ಅಮೆಜಾನ್‌ ಸಂಸ್ಥೆ ಪೇಂಟಿಂಗ್ ಮಾರಾಟವನ್ನು ಹಿಂಪಡೆಯುವುದು ಮಾತ್ರವಲ್ಲ, ಬೇಷರತ್‌ ಕ್ಷಮೆ ಕೋರಬೇಕು ಹಾಗೂ ಹಿಂದೂಗಳ ಭಾವನೆಗೆ ಮತ್ತೊಮ್ಮೆ ಧಕ್ಕೆ ತರುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕೆಂದೂ ಹಿಂದೂ ಸಂಘಟನೆ ಟ್ವೀಟ್‌ ಮಾಡಿತ್ತು. ಇದೇ ರೀತಿ, ಹಲವು ನೆಟ್ಟಿಗರು ಅಶ್ಲೀಲ ಪೇಂಟಿಂಗ್ ಅನ್ನು ತೆಗೆದುಹಾಕಿ ಹಾಗೂ ಅಮೆಜಾನ್‌ ಅನ್ನು ಬಹಿಷ್ಕರಿಸಿ ಎಂದು ಟ್ವೀಟ್‌ಗಳ ಸುರಿಮಳೆಯನ್ನೇ ಮಾಡಿದ್ದು, ಈ ಹಿನ್ನೆಲೆ ಟ್ವಿಟ್ಟರ್‌ ಇಂಡಿಯಾದಲ್ಲಿ #BoycottAmazon ಎಂಬ ಹ್ಯಾಶ್‌ಟ್ಯಾಗ್‌ ಕೆಲ ಕಾಲ ಟ್ರೆಂಡ್‌ ಆಗುತ್ತಿತ್ತು.

ಪೇಂಟಿಂಗ್ ಸಮರ್ಥಿಸಿಕೊಂಡ ಕೆಲ ನೆಟ್ಟಿಗರು 
ಹಲವು ನೆಟ್ಟಿಗರು ಅಮೆಜಾನ್ ಬಹಿಷ್ಕಾರಕ್ಕೆ ಕರೆ ನೀಡಿದರೆ, ಟ್ವಿಟರ್ ಬಳಕೆದಾರರೊಬ್ಬರು ಹೀಗೆ ಹೇಳಿದ್ದಾರೆ: “ಇದು ಗೀತ ಗೋವಿಂದನ ಕಾಂಗ್ರಾ ಪೇಂಟಿಂಗ್. 1780 ನೇ ಇಸವಿಯದ್ದು. ಅದೇ ಸಮಯದ ಇನ್ನೂ ನೂರಾಂರು ಪೇಂಟಿಂಗ್ ಇವೆ. ನೀವು ಗೀತ ಗೋವಿಂದವನ್ನು ನಿಜಕ್ಕೂ ಓದಿದ್ದೀರಾ..? “ಕ್ಷಮೆ ಕೇಳದ ಹಿಂದೂ”ವಾಗಿ ನೀವು ಇದನ್ನು ಓದಿರಬೇಕಿತ್ತು. ಕೆಳಗಿನ ಆಯ್ದ ಭಾಗಗಳು. ದಯವಿಟ್ಟು ಜಯದೇವನನ್ನು ನಿಷೇಧಿಸುವಂತೆ ಸರ್ಕಾರವನ್ನು ಕೇಳಿ.” ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ತಮ್ಮ ಟ್ವೀಟ್‌ನಲ್ಲಿ ಕೆಲ ವಿವರಣೆಯನ್ನೂ ನೀಡಿದ್ದಾರೆ.
ಇನ್ನು, ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಇಷ್ಟೆಲ್ಲ ಕೋಲಾಹಲ ಸೃಷ್ಟಿಯಾಗುತ್ತಿದ್ದರೂ, ಈ ಬಗ್ಗೆ ಅಮೆಜಾನ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

https://mobile.twitter.com/AmitLeliSlayer/status/1560622546961108995?ref_src=twsrc%5Etfw%7Ctwcamp%5Etweetembed%7Ctwterm%5E1560622546961108995%7Ctwgr%5Ef198c413035d532937785cd881a9daef60efc4ce%7Ctwcon%5Es1_&ref_url=https%3A%2F%2Fkannada.newsnext.live%2Famazon-sells-obscene-radha-krishna-painting-on-janmashtami-angry-netizens-tweet-boycott-amazon%2F
Leave A Reply

Your email address will not be published.