ಬಸ್ ಪ್ರಯಾಣದ ವೇಳೆ ಮಹಿಳೆಯರನ್ನು ದಿಟ್ಟಿಸಿ ನೋಡಿದ್ರೆ ಹುಷಾರ್ ; ಹೊಸ ಕಾನೂನು ಏನು ಹೇಳುತ್ತೆ ಗೊತ್ತಾ?
ಮೋಟಾರು ವಾಹನ ಕಾಯ್ದೆಗೆ ಹೊಸ ತಿದ್ದುಪಡಿಯೊಂದು ಬಂದಿದ್ದು, ಇದರ ಪ್ರಕಾರ ಇನ್ಮುಂದೆ ಬಸ್ನಲ್ಲಿ ಪ್ರಯಾಣಿಸುವಾಗ ಗಂಡಸರು ಮಹಿಳೆಯರನ್ನು ದಿಟ್ಟಿಸಿ ನೋಡುವಂತಿಲ್ಲ. ಈ ನಿಯಮ ಮೀರಿದ್ರೆ ಶಿಕ್ಷೆ ಫಿಕ್ಸ್..
ಹೌದು. ಇಂತಹ ಒಂದು ನಿಯಮವನ್ನು ತಮಿಳುನಾಡಿನಲ್ಲಿ ಜಾರಿಗೆ ಬಂದಿದ್ದು, ಈ ಕಾಯ್ದೆಯ ಪ್ರಕಾರ ಬಸ್ ಪ್ರಯಾಣದ ವೇಳೆ ಮಹಿಳೆಯರನ್ನು ದಿಟ್ಟಿಸಿ ನೋಡುವವರನ್ನು ಬಂಧಿಸಲು ಅವಕಾಶವಿದೆ. ಅಷ್ಟೇ ಅಲ್ಲದೆ, ಶಿಳ್ಳೆ ಹೊಡೆಯುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು, ಮಹಿಳೆಯರನ್ನು ಲೈಂಗಿಕ ಪ್ರಲೋಭನೆಗಳಿಗೆ ಒಳಪಡಿಸಲು ಯತ್ನಿಸುವುದು ಕೂಡ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ.
ತಿದ್ದುಪಡಿ ಮಾಡಲಾದ ಕಾಯಿದೆಯ ಅಡಿಯಲ್ಲಿ, ಪ್ರಯಾಣಿಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರೆ ಬಸ್ ಕಂಡಕ್ಟರ್ ಆತನನ್ನು ಕೆಳಕ್ಕಿಳಿಸಿ, ಸಮೀಪದ ಪೊಲೀಸ್ ಠಾಣೆಗೆ ಹಸ್ತಾಂತರಿಸಬೇಕು.ಯಾವುದೇ ಪುರುಷ ಪ್ರಯಾಣಿಕರನ್ನು ಅವರು ಕುಳಿತಿರುವ ಆಸನದಿಂದ ಕೆಳಗಿಳಿಸಲು ಕಂಡಕ್ಟರ್ಗಳು ಕರ್ತವ್ಯ ಬದ್ಧರಾಗಿರುತ್ತಾರೆ. ಕಂಡಕ್ಟರ್ ಕರ್ತವ್ಯ ಲೋಪ ಮಾಡಿದಲ್ಲಿ ಈ ಬಗ್ಗೆ ದೂರು ದಾಖಲಿಸಲು ಪ್ರಯಾಣಿಕರಿಗೆ ಅವಕಾಶ ಕೊಡಲಾಗುತ್ತದೆ. ದೂರು ದಾಖಲಿಸಲು ಪುಸ್ತಕವನ್ನು ಒದಗಿಸಲಾಗುತ್ತಿದ್ದು, ಅದನ್ನು ಮೋಟಾರು ವಾಹನ ಪ್ರಾಧಿಕಾರ ಅಥವಾ ಪೊಲೀಸರ ಮುಂದೆ ಹಾಜರುಪಡಿಸಬೇಕು.
ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಕಂಡಕ್ಟರ್ಗಳಿಗೆ ಸಹ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಬಸ್ ಹತ್ತುವ ಅಥವಾ ಇಳಿಯುವ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನು ಕಂಡಕ್ಟರ್ ಸ್ಪರ್ಶಿಸಿದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕಂಡಕ್ಟರ್, ಮಹಿಳಾ ಪ್ರಯಾಣಿಕರ ಬಗ್ಗೆ ಕೆಟ್ಟದಾಗಿ ಹಾಸ್ಯ ಮಾಡುವುದು, ಅಸಹ್ಯವಾದ ಕಮೆಂಟ್ ಪಾಸ್ ಮಾಡುವುದು, ಲೈಂಗಿಕ ಅರ್ಥ ಬರುವಂತೆ ಮಾತನಾಡುವುದು ಮಾಡುವಂತಿಲ್ಲ.