ಇರುವೆ ಕಾಟದಿಂದ ಊರನ್ನೇ ತೊರೆಯುತ್ತಿರುವ ಜನ ; ಕಣ್ಣು ಕಳೆದು ಕೊಳ್ಳುತ್ತಿರುವ ಜಾನುವಾರುಗಳಿಂದ ಆತಂಕಗೊಳಗಾದ ಗ್ರಾಮಸ್ಥರು
ಸಾಮಾನ್ಯವಾಗಿ ನಾವೆಲ್ಲ ಇರುವೆ ಅಂದ್ರೆ ಕೀಳಾಗಿ ನೋಡುತ್ತೇವೆ. ಅದನ್ನು ಒಂದು ಕ್ಷಣದಲ್ಲಿ ಮದ್ದು ಸಿಂಪಡಿಸಿಯೋ ಅಥವಾ ಏನೋ ಮಾಡಿ ಸಾಯಿಸಿ ಬಿಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಕ್ರೇಜಿ ಇರುವೆಗಳು ಇಡೀ ಊರನ್ನೇ ಖಾಲಿ ಮಾಡಿಸಿದೆ. ಅಷ್ಟೇ ಅಲ್ಲದೆ, ಪ್ರಾಣಿಗಳಿಗೆ ಕಣ್ಣೇ ಕಾಣದಂತೆ ಮಾಡಿದೆ. ಅಷ್ಟಕ್ಕೂ ಇದು ಯಾವ ಇರುವೆ, ಎಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ಮುಂದೆ ಓದಿ..
ಹೌದು. ಈ ವಿಚಿತ್ರ ಕಾಟದಿಂದ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕಾರಂತಮಲೈ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಬೆಟ್ಟ ಪ್ರದೇಶದಲ್ಲಿರುವ ಹಳ್ಳಿಗಳಲ್ಲಿನ ಜನರು ಬಳಲುತ್ತಿದ್ದಾರೆ. ಈ ಇರುವೆಗಳು ಜಾನುವಾರುಗಳು ಮತ್ತು ಬೆಳೆಗಳ ಮೇಲೆ ದಂಡು ದಂಡಾಗಿ ದಾಳಿ ನಡೆಸುತ್ತಿವೆ. ಇದರಿಂದ ಅವರ ಜೀವನೋಪಾಯವೇ ಅಪಾಯಕ್ಕೆ ಸಿಲುಕಿದೆ. ಅಲ್ಲದೆ, ಮನೆಯೆಲ್ಲಾ ಆವರಿಸಿಕೊಂಡು ಜನರಿಗೆ ನೆಮ್ಮದಿಯಿಲ್ಲದೆ ಮನೆಯನ್ನೇ ತೊರೆಯುವಂತೆ ಮಾಡಿದೆ ಈ ಇರುವೆಗಳು.
ಜಗತ್ತಿನ ಅತ್ಯಂತ ಕೆಟ್ಟ ಆಕ್ರಮಣಕಾರಿ ಜೀವಿಗಳಲ್ಲಿ ಹಳದಿ ಹುಚ್ಚು ಇರುವೆಗಳೂ ಒಂದು. ಈ ಇರುವೆಗಳನ್ನು ‘ಹುಚ್ಚು’ ಅಥವಾ ‘ಕ್ರೇಜಿ’ ಎಂದು ಕರೆಯುವುದಕ್ಕೆ ಕಾರಣವಿದೆ. ಇವು ಬೇರೆ ಇರುವೆಗಳಂತೆ ಕಚ್ಚುವುದು ಅಥವಾ ಕುಟುಕುವುದನ್ನು ಮಾಡುವುದಿಲ್ಲ. ಆದರೆ ಫಾರ್ಮಿಕ್ ಆಸಿಡ್ ಅನ್ನು ಸಿಂಪಡಿಸುತ್ತದೆ. ಇದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುತ್ತವೆ. ಇರುವೆಗಳಿಗೆ ಆನೋಪ್ಲೋಲೆಪಿಸ್ ಗ್ರೇಸಿಲೈಪ್ ಎಂಬ ವೈಜ್ಞಾನಿಕ ಹೆಸರಿದೆ. ಇವು ಸಾಮಾನ್ಯವಾಗಿ ಉಷ್ಣವಲಯ ಮತ್ತು ಉಪ ಉಪಷ್ಣವಲಯಗಳಲ್ಲಿ ಕಾಣಿಸುತ್ತವೆ.
ಇರುವೆಗಳು ಶಿಸ್ತಿಗೆ ಹೆಸರುವಾಸಿ. ಸಾಲಾಗಿ ನಡೆಯುವುದು ಈ ಶಿಸ್ತಿನ ಒಂದು ಭಾಗ. ಆದರೆ ಹಳದಿ ಹುಚ್ಚು ಇರುವೆಗಳಲ್ಲಿ ಈ ಶಿಸ್ತನ್ನು ಕಾಣಲು ಸಾಧ್ಯವಿಲ್ಲ. ಇವು ಮನಬಂದಂತೆ ಓಡುತ್ತವೆ. ಸಾಲಾಗಿ ಹೋಗುವುದು ಅಥವಾ ನಿಧಾನವಾಗಿ ಸಾಗುವುದು ಇವುಗಳ ಜಾಯಮಾನವಲ್ಲ. ಕಂಡ ಕಂಡ ಜಾಗಗಳಲ್ಲಿ, ಅಡ್ಡಾದಿಡ್ಡಿ ನುಗ್ಗುತ್ತವೆ. ಅದರಲ್ಲಿಯೂ ಅವುಗಳಿಗೆ ತೊಂದರೆಯಾದಾಗ ಭಾವೋದ್ರೇಕದಿಂದ ಹರಿದಾಡಲು ಆರಂಭಿಸುತ್ತವೆ. ಹಾಗೆಯೇ ಈ ತಳಿಯ ಇರುವೆಗಳಲ್ಲಿ ಸಂತಾನೋತ್ಪತ್ತಿ ಶಕ್ತಿ ಹೆಚ್ಚು. ಇವುಗಳ ಸಂಖ್ಯೆ ಹೆಚ್ಚಿದಷ್ಟೂ ಸ್ಥಳೀಯ ವನ್ಯಜೀವಿಗಳಿಗೆ ಭಾರಿ ಹಾನಿ ಮಾಡುತ್ತವೆ.
“ನಾವು ಅರಣ್ಯದ ಸಮೀಪ ಹೋಗುತ್ತಿದ್ದಂತೆಯೇ ಇರುವೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಕಿರಿಕಿರಿ ಉಂಟುಮಾಡುತ್ತವೆ ಮತ್ತು ಮೈಯಲ್ಲಿ ಬೊಕ್ಕೆಗಳು ಉಂಟಾಗುತ್ತವೆ. ನಾವು ಕುಡಿಯಲು ನೀರು ಸಹ ಕೊಂಡೊಯ್ಯುವಂತೆ ಇಲ್ಲ. ಅದರ ಒಳಗೂ ರಾಶಿ ರಾಶಿ ಬೀಳುತ್ತವೆ. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ” ಎಂದು 55 ವರ್ಷದ ರೈತ ಸೆಲ್ವಂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅರಣ್ಯ ಭಾಗದಲ್ಲಿ ಈ ಇರುವೆಗಳನ್ನು ನೋಡುತ್ತಿದ್ದೆವು. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಳ್ಳಿಗಳಿಗೆ ದಾಂಗುಡಿ ಇರಿಸುತ್ತಿರುವುದು ಇದೇ ಮೊದಲು. ಇದರಿಂದ ಜೀವನವೇ ತಲೆಕೆಳಗಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡಿನ ಸಮೀಪ ವಾಸಿಸುವ ದನಗಾವಲುಗಾರರು ಇರುವೆಗಳ ಮುತ್ತಿಗೆಗೆ ಬೆದರಿ ತಮ್ಮ ಜಾಗಗಳನ್ನೇ ತೊರೆದಿದ್ದಾರೆ. “ನನ್ನ ಮನೆ ಮೇಲೆ ಇರುವೆಗಳು ಮುತ್ತಿಗೆ ಹಾಕಿದ್ದರಿಂದ, ನಾನು ಅಲ್ಲಿಂದ ಹೊರಟುಬಂದಿದ್ದೇನೆ. ಅವುಗಳನ್ನು ತಡೆಯುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇರುವೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ” ಎಂದು ನಾಗಮ್ಮಾಳ್ ತಿಳಿಸಿದ್ದಾರೆ. ಅವರ ಮೇಕೆಗಳು ಇರುವೆಗಳ ದಾಳಿಗೆ ಒಳಗಾಗಿವೆ ಎಂದು ಹೇಳಿದ್ದಾರೆ.
ಈ ಇರುವೆಗಳು ಸಾಮಾನ್ಯ ಇರುವೆಗಳಂತೆಯೇ ಕಾಣಿಸುತ್ತಿವೆ ಎಂದು ಸರ್ಕಾರಿ ಪಶುವೈದ್ಯ ಡಾ. ಸಿಂಗಮುತ್ತು ಹೇಳಿದ್ದಾರೆ.”ಅವು ಏಕೆ ಹರಡುತ್ತಿವೆ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ. ಅವುಗಳನ್ನು ತಡೆಯುವುದು ಹೇಗೆ ಎನ್ನುವುದು ಕೂಡ ನಮಗೆ ಅರ್ಥವಾಗುತ್ತಿಲ್ಲ. ಮನುಷ್ಯರು ಮತ್ತು ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಗೆ ಇದೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಜಾನುವಾರುಗಳನ್ನು ಮೇಯಿಸಲು ಅರಣ್ಯಕ್ಕೆ ಬಿಡಬೇಡಿ ಎಂದು ಸಲಹೆ ನೀಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಇರುವೆಗಳ ದಾಳಿಗೆ ತಮ್ಮ ಜಾನುವಾರುಗಳು ಮಾತ್ರವಲ್ಲ, ಹಾವುಗಳು ಮತ್ತು ಮೊಲಗಳು ಕೂಡ ಸತ್ತುಹೋಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನೂರಾರು ಇರುವೆಗಳು ಸಿಂಪಡಿಸುವ ಫಾರ್ಮಿಕ್ ಆಸಿಡ್, ಪ್ರಾಣಿಗಳ ಕಣ್ಣಿಗೆ ಹಾನಿ ಉಂಟುಮಾಡಿರಬಹುದು. ಅವು ನಿರ್ದಿಷ್ಟವಾಗಿ ಕಣ್ಣುಗಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತವೆಯೇ ಎನ್ನುವುದು ಎಲ್ಲಿಯೂ ದಾಖಲಾಗಿಲ್ಲ. ಮನುಷ್ಯರಲ್ಲಿ ಆಸಿಡ್‌ನಿಂದ ಅಲರ್ಜಿಯಂತಹ ಪರಿಣಾಮಗಳು ಉಂಟಾಗಬಹುದು. ಆದರೆ ಜೀವಕ್ಕೆ ಅಪಾಯ ಉಂಟಾಗಲಾರದು ಎಂದು ಡಾ. ಬೈದ್ಯ ತಿಳಿಸಿದ್ದಾರೆ.