ಎರಡನೇ ಮದುವೆ ಆಗ್ತಾರಾ ಮೇಘನಾ ರಾಜ್ !? ; ಈ ಕುರಿತು ಸರ್ಜಾ ವೈಫ್ ಹೇಳಿದ್ದೇನು?
ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಮತ್ತೆ ಸಿನಿಮಾ, ರಿಯಾಲಿಟಿ ಶೋ, ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. 2 ವರ್ಷಗಳ ಹಿಂದಿನ ದುರ್ಘಟನೆ ನೋವಿನಿಂದ ನಿಧಾನವಾಗಿ ಹೊರ ಬರುತ್ತಿರುವ ಮೇಘನಾ ರಾಜ್, ಮಗ ರಾಯನ್ ರಾಜ್ ಸರ್ಜಾ ಅವರ ನಗುವಿನಲ್ಲಿ ಖುಷಿ ಕಾಣುತ್ತಿದ್ದಾರೆ. ನೋವಿನಿಂದ ಇನ್ನಷ್ಟೇ ಚೇತರಿಕೊಳ್ಳುತ್ತಿರುವ ಇವರಿಗೆ, ಕೆಲವು ವದಂತಿಗಳ ಪೆಟ್ಟು ಬಿದ್ದಿದೆ. ಹೌದು. ಈ ಮಧ್ಯೆ ನಟಿ ಮೇಘನಾ ರಾಜ್ ಮತ್ತೊಮ್ಮೆ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಡುತ್ತಿದೆ.
ಅಂದಹಾಗೆ, ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರದ್ದು 10 ವರ್ಷಗಳ ಪ್ರೀತಿ. 2018 ರಲ್ಲಿ ಈ ಜೋಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಗೆ ಹೊಸ ರೂಪ ನೀಡಿದ್ದರು. ಆದರೆ ವಿಧಿ ಇವರ ಸಂತೋಷವನ್ನು ದೂರ ಮಾಡಿತು. 7 ಜೂನ್ 2020 ರಂದು ಚಿರು ಹೃದಯಾಘಾತದಿಂದ ನಿಧನರಾದರು. ಈ ವಿಚಾರ ತಿಳಿದು ಚಿತ್ರರಂಗದ ಗಣ್ಯರು ಮಾತ್ರವಲ್ಲದೆ ಇಡೀ ರಾಜ್ಯವೇ ದು:ಖ ವ್ಯಕ್ತಪಡಿಸಿತ್ತು.
ಇಂತಹ ದುಃಖದ ಸಮಯದಲ್ಲಿ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು. ಚಿರಂಜೀವಿ ಸರ್ಜಾ ನಿಧನರಾದ ನಂತರ ಕುಟುಂಬ, ಅಭಿಮಾನಿಗಳು, ಸ್ನೇಹಿತರು ಮೇಘನಾ ಬೆಂಬಲವಾಗಿ ನಿಂತರು. ಅದೇ ವರ್ಷ ಅಕ್ಟೋಬರ್ 22ರಂದು ಮೇಘನಾ, ಗಂಡುಮಗುವಿಗೆ ಜನ್ಮ ನೀಡಿದರು. ಈ ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟರು. ರಾಯನ್ಗೆ ಈಗ 2 ವರ್ಷಗಳಾಗುತ್ತಾ ಬರುತ್ತಿದೆ. ಮಗನ ಖುಷಿಯಲ್ಲಿ ಜೀವನ ಸಾಗಿಸುತ್ತಿರುವ ನಡುವೆ ಮೇಘನಾ ರಾಜ್ ಎರಡನೇ ಮದುವೆ ವಿಚಾರ ಮತ್ತೆ ಹಬ್ಬಿದೆ.
ಹೌದು ಮೇಘನಾ ಸರ್ಜಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸಂಗತಿ ಎಲ್ಲೆಡೆ ಹರಿದಾಡಲಾರಂಭಿಸಿದೆ. ಈ ವಿಚಾರದ ಬಗ್ಗೆ ಸ್ವತಃ ಮೇಘನಾ ಸರ್ಜಾ ಮನಸ್ಸು ಬಿಚ್ಚಿ ಮಾತನಾಡಿದ್ದು, ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಮೇಘನಾ ರಾಜ್, ನನ್ನ ಸುತ್ತಲೂ ಇರುವ ಹಲವರು ನನಗೆ ಎರಡನೇ ಮದುವೆಯಾಗಲು ಸಲಹೆ ನೀಡುತ್ತಿದ್ದಾರೆ. ಆದರೆ ಒಂಟಿಯಾಗಿರಲು ಮತ್ತು ಒಂಟಿಯಾಗಿಯೇ ಮಗನನ್ನು ಬೆಳೆಸಲು ಸಲಹೆ ನೀಡುವ ತಂಡವೂ ಇದೆ ಎಂದು ಮೇಘನಾ ಹೇಳಿದ್ದಾರೆ.
ಅಲ್ಲದೆ, ಇತ್ತೀಚಿಗೆ ಮೇಘನಾ ರಾಜ್ ಸರ್ಜಾ ಅವರು ತಮ್ಮ ಪತಿಯನ್ನು ಮರೆತು ತಮ್ಮ ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮೇಘನಾ, ತಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.
ನಮ್ಮ ಸಮಾಜದ ಮನಸ್ಥಿತಿಯೂ ನನಗೆ ಮದುವೆಯಾಗಲು ಸಲಹೆ ನೀಡುವಂತೆಯೂ ಇದೆ. ಅದೇ ರೀತಿ ನೀವು ಮಗನೊಂದಿಗೆ ಸುಖವಾಗಿರಿ ಎನ್ನುವವರು ಇದ್ದಾರೆ. ಹೀಗಾಗಿ ನಾನು ಯಾರ ಮಾತನ್ನು ಕೇಳಲಿ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಆದರೆ ನಾನು ಕೊನೆಯಲ್ಲಿ ನನ್ನ ಮಾತನ್ನು ಕೇಳುವ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ. ಅಲ್ಲದೇ ಇದೇ ವಿಚಾರಕ್ಕೆ ಚಿರು ಮಾತೊಂದನ್ನು ನೆನಪಿಸಿಕೊಂಡಿರೋ ಮೇಘನಾ, ಜಗತ್ತು ಏನೇ ಹೇಳಿದ್ರೂ ನಿನ್ನ ಮಾತನ್ನು ನೀನು ಕೇಳು ಎಂದು ಚಿರಂಜೀವಿ ಯಾವಾಗಲೂ ಹೇಳುತ್ತಿದ್ದರು. ಹಾಗಾಗಿ ನಾನು ಅದನ್ನೇ ಅನಸರಿಸುತ್ತಿದ್ದೇನೆ ಎಂದಿದ್ದಾರೆ.
ಅಲ್ಲದೇ ನಾನು ಇನ್ನೊಂದು ಮದುವೆಯಾಗಬೇಕೇ ಎಂಬುದನ್ನು ನನಗೆ ನಾನು ಇನ್ನೂ ಕೇಳಿಕೊಂಡಿಲ್ಲ. ಇನ್ನೊಂದು ಮಹತ್ವದ ಸಂಗತಿ ಎಂದರೇ ಚಿರು ಬಿಟ್ಟು ಹೋದ ಬದುಕಿನ ಮಾರ್ಗ. ನಾಳೆ ಏನಾಗಲಿದೆ ಎಂದು ನಾನು ಯೋಚಿಸುವುದಿಲ್ಲ. ಒಂದೆರಡು ದಿನಗಳ ನಂತರ ನನ್ನ ಜೀವನ ಹೇಗಿರುತ್ತದೆ ಎಂದು ನಾನು ಯೋಚಿಸುವುದಿಲ್ಲ ಎಂದಿದ್ದಾರೆ.
ನಾನು ಐದು ತಿಂಗಳ ಅವಧಿಯಲ್ಲಿ ಜೀವನ ಮತ್ತು ಸಾವನ್ನು ನೋಡಿದ್ದೇನೆ. ನಿಭಾಯಿಸಲು ನನಗೆ ಸಮಯ ಹಿಡಿಯಿತು. ಈ ಘಟನೆ ನಡೆದಾಗ ನಾನು ಗರ್ಭಿಣಿಯಾಗಿದ್ದೆ. ಚಿರು ಸಾವಿನ ನೋವಿನಲ್ಲೂ ನಾನು ನನ್ನ ಮಗುವಿನತ್ತ ಗಮನ ಕೊಡಬೇಕಿತ್ತು. ನಾನು ನಮ್ಮ ಮಗುವಿನ ಬಗ್ಗೆ ಕಾಳಜಿವಹಿಸಬೇಕಿತ್ತು. ರಾಯನ್ಗಾಗಿ , ಅವನ ಸಂತೋಷಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಮೇಘನಾ ಹೇಳಿದರು.
ಮೇಘನಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಕಳೆದ ಮೇ ತಿಂಗಳಲ್ಲಿ ಸೃಜನ್ ಲೋಕೇಶ್ ಜೊತೆ ನಟಿಸಿರುವ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾ ತೆರೆ ಕಂಡಿತ್ತು. ‘ಬುದ್ಧಿವಂತ 2’ ಚಿತ್ರದಲ್ಲಿ ಕೂಡಾ ಮೇಘನಾ ನಟಿಸಿದ್ದಾರೆ. ಇದೆಲ್ಲವೂ ಬಹಳ ದಿನಗಳ ಹಿಂದೆ ನಟಿಸಿದ್ದ ಸಿನಿಮಾಗಳು. ಕಳೆದ ವರ್ಷ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಈಗ ಅವರು ಅಭಿನಯಿಸುತ್ತಿರುವ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರವನ್ನು ಚಿರಂಜೀವಿ ಸರ್ಜಾ ಹಾಗೂ ಮೇಘನಾ ಆಪ್ತ ಗೆಳೆಯ ಪನ್ನಗಾಭರಣ ನಿರ್ಮಿಸುತ್ತಿದ್ದು, ವಿಶಾಲ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಪನ್ನಗಾಭರಣ, ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.