ಅಪ್ಪುಗೆಯಿಂದ ಮುರಿದು ಹೋಯ್ತು ಮಹಿಳೆಯ ಪಕ್ಕೆಲುಬು!
ಸ್ನೇಹಿತರನ್ನು ತಬ್ಬಿಕೊಳ್ಳುವುದು ಇತ್ತೀಚೆಗೆ ಅಂತೂ ಕಾಮನ್ ಆಗಿ ಬಿಟ್ಟಿದೆ. ಕಾಮನ್ ಅನ್ನುವುದಕ್ಕಿಂತಲೂ ಇದೊಂದು ತರ ಫ್ಯಾಷನ್ ಆಗಿ ಬಿಟ್ಟಿದೆ. ಹಾಯ್ ಎಂದು ಕೈ ಶೇಕ್ ಮಾಡುವ ಬದಲು ತಬ್ಬಿಕೊಂಡು ವಿಶ್ ತಿಳಿಸುವವರೇ ಹೆಚ್ಚು. ಆದ್ರೆ, ಇಲ್ಲೊಂದು ಕಡೆ, ಮಹಿಳೆಯನ್ನು ತಬ್ಬಿಕೊಂಡಿದ್ದಕ್ಕೆ ಪುರುಷ ಒಂದೂವರೆ ಲಕ್ಷ ರೂಪಾಯಿ ದಂಡ ಕಟ್ಟಿದ ಘಟನೆ ವರದಿಯಾಗಿದೆ.
ಮಹಿಳಾ ಸಹೋದ್ಯೋಗಿಯನ್ನು ತಬ್ಬಿಕೊಂಡ ಪರಿಣಾಮ ಆಕೆಯ ಪಕ್ಕೆಲುಬುಗಳು ಮುರಿದು ಆತ ಒಂದೂವರೆ ಲಕ್ಷ ರೂಪಾಯಿ ದಂಡ ಕಟ್ಟಿದ ಘಟನೆ ಚೀನಾದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಚೀನಾದ ಯುಯಾಂಗ್ ನಗರದಲ್ಲಿರುವ ಕಂಪನಿಯೊಂದರ ಉದ್ಯೋಗಿ. ಈಕೆ ಒಬ್ಬರ ಜೊತೆ ಮಾತನಾಡುವಾಗ ಹಿಂಬದಿಯಿಂದ ಬಂದ ಮತ್ತೊರ್ವ ಸಹೋದ್ಯೋಗಿ ಆಕೆಯನ್ನು ತುಂಬಾ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಆದರೆ, ಆಕೆಗೆ ಬಿಗಿಯಾದ ಆಲಿಂಗನವು ತುಂಬಾ ನೋವುಂಟು ಮಾಡಿದ್ದರಿಂದ ಕಣ್ಣೀರಿಡುತ್ತಾಳೆ.
ಸಹೋದ್ಯೋಗಿಯ ಬಿಗಿಯಾದ ಆಲಿಂಗನದಿಂದ ಬಿಡಿಸಿಕೊಂಡರೂ ಆಕೆಯ ಎದೆ ನೋವು ಮಾತ್ರ ಕಡಿಮೆ ಆಗುವುದೇ ಇಲ್ಲ. ಬಳಿಕ ಕೆಲಸ ಮುಗಿಸಿಕೊಂಡು ಮಹಿಳೆ ಮನೆಗೆ ಹಿಂತಿರುತ್ತಾಳೆ. ಎದೆ ನೋವು ಕಡಿಮೆಯಾಗದ ಕಾರಣ ಬಿಸಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುತ್ತಾಳೆ. ಆದರೂ ಐದು ದಿನಗಳಾದರೂ ನೋವು ಮಾತ್ರ ಕಡಿಮೆ ಆಗುವುದೇ ಇಲ್ಲ. ಬಳಿಕ ವೈದ್ಯರನ್ನು ಕಾಣುವುದೇ ಸರಿ ಅಂತ ಮಹಿಳೆ ಆಸ್ಪತ್ರೆಗೆ ತೆರಳುತ್ತಾಳೆ. ಆಕೆಯ ಎಕ್ಷ್ರೇ ತೆಗೆದು ನೋಡುವ ವೈದ್ಯರು, ಬಲಭಾಗದಲ್ಲಿ ಎರಡು ಮತ್ತು ಎಡಭಾಗದಲ್ಲಿ ಎರಡು ಪಕ್ಕೆಲುಬುಗಳು ಮುರಿದಿವೆ ಎಂದು ಹೇಳುತ್ತಾರೆ.
ಇದನ್ನು ಕೇಳಿ ಮಹಿಳೆ ತಬ್ಬಿಬ್ಬಾಗಿ, ಚಿಕಿತ್ಸೆ ಕಾರಣದಿಂದ ಕೆಲಸಕ್ಕೆ ಹೋಗಲು ಆಗದೇ ರಜೆ ತೆಗೆದುಕೊಳ್ಳುತ್ತಾಳೆ. ರಜಾ ಅವಧಿಯಲ್ಲಿ ಮಹಿಳೆಗೆ ಯಾವುದೇ ಸಂಬಳ ದೊರೆಯುವುದಿಲ್ಲ. ಇಷ್ಟೇ ಅಲ್ಲದೆ, ಹೆಚ್ಚುವರಿಯಾಗಿ ಆಕೆಗೆ ಆಸ್ಪತ್ರೆಯ ವೆಚ್ಚಗಳು ಸಹ ಬೀಳುತ್ತದೆ. ಇದರಿಂದ ಆಕೆಯ ಅವ್ಯವಸ್ಥೆಗೆ ಕಾರಣವಾದ ಸಹೋದ್ಯೋಗಿಯನ್ನು ಆಸ್ಪತ್ರೆಯ ವೆಚ್ಚ ಭರಿಸುವಂತೆ ಕೇಳುತ್ತಾಳೆ. ಆದರೆ, ಆತ ಆಕೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ಇದಾದ ಬಳಿಕ ಬೇರೆ ದಾರಿಯಿಲ್ಲದೇ ಸಂತ್ರಸ್ತೆ ನ್ಯಾಯಾಲಯದ ಮೆಟ್ಟಿಲೇರುತ್ತಾಳೆ.
ಈ ಘಟನೆ ಕುರಿತು ನ್ಯಾಯಾಲಯ ತನಿಖೆ ನಡೆಸಿದ್ದು, ಪಕ್ಕೆಲುಬುಗಳು ಮುರಿದಿರುವುದರಿಂದ ಆಕೆಗೆ ಯಾವುದೇ ಕೆಲಸ ಮಾಡಿಕೊಳ್ಳಲು ಸಹ ಆಗುವುದಿಲ್ಲ. ಕೊನೆಗೆ ತನಿಖೆಯನ್ನು ಸಹೋದ್ಯೋಗಿಯ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 10 ಸಾವಿರ ಯುವಾನ್ (ಭಾರತೀಯ ಕರೆನ್ಸಿ ಪ್ರಕಾರ 1.6 ಲಕ್ಷ ರೂಪಾಯಿ) ನೀಡುವಂತೆ ಆದೇಶಿಸುತ್ತದೆ. ಒಟ್ಟಾರೆ, ಒಂದು ಅಪ್ಪುಗೆಯಿಂದ ಇಂತಹ ನರಕಯಾತನೆ ಅನುಭವಿಸುವಂತೆ ಆಗಿದೆ.