ಸೌದಿಯಲ್ಲಿ ಒಂದು ಟ್ವೀಟ್ ಗೆ ಬರೋಬ್ಬರಿ 34 ವರ್ಷ ಶಿಕ್ಷೆ!
ವಿದ್ಯಾರ್ಥಿನಿಯೊಬ್ಬಳು ಟ್ವಿಟರ್ ಬಳಕೆ ಮಾಡಿದ್ದಕ್ಕೆ ಬರೋಬ್ಬರಿ 34 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ನಡೆದಿದ್ದು, ಈಕೆಯ ಶಿಕ್ಷೆಗೆ ಕಾರಣವಾಗಿದ್ದು ಆಕೆಯ ಆ ಒಂದು ಟ್ವೀಟ್.
ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿನಿ ಸಲ್ಮಾ ಅಲ್ ಶೆಹಾಬ್. ಈಕೆ ಲೀಡ್ಸ್ ಯೂನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಳು. ಬ್ರಿಟನ್‌ನಲ್ಲಿ ನೆಲೆಸಿದ್ದ ಸಲ್ಮಾ ಟ್ವಿಟರ್ ಖಾತೆಯನ್ನು ಹೊಂದಿದ್ದು, ಮಹಿಳಾ ಹಕ್ಕುಗಳ ಪರವಾಗಿ ಅನೇಕ ಟ್ವಿಟ್‌ಗಳನ್ನು ಮಾಡಿದ್ದಳು. ಇದೀಗ ಭಿನ್ನಮತೀಯರ ಟ್ವಿಟ್‌ಗಳನ್ನು ರೀಟ್ವಿಟ್ ಮಾಡಿದ್ದಕ್ಕಾಗಿ ವಿದ್ಯಾರ್ಥಿನಿ ಈ ಶಿಕ್ಷೆಗೆ ಒಳಗಾಗಿದ್ದಾಳೆ.
ಭಿನ್ನಮತೀಯರ ಟ್ವಿಟ್ ಗಳನ್ನು ರೀಟ್ವಿಟ್ ಮಾಡಿದ್ದಕ್ಕೆ ಆಕೆಯ ವಿರುದ್ಧ ಸೌದಿ ಅರೇಬಿಯಾ ಸರ್ಕಾರ ಗರಂ ಆಗಿದೆ. ಟ್ವಿಟ್ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಪಯತ್ನ, ಸಾರ್ವಜನಿಕರ ಜೀವನಕ್ಕೆ ತೊ೦ದರೆ, ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಮತ್ತು ಟ್ವಿಟ್ ಮೂಲಕ ಸುಳ್ಳು ಮಾಹಿತಿಗಳನ್ನು ಹರಡಿರುವ ಆರೋಪವನ್ನು ಕೋರ್ಟ್ ಮಾಡಿದೆ. ಅಲ್ಲದೆ ಸ್ಥಳೀಯ ಭಯೋತ್ಪಾದನಾ ಕೋರ್ಟ್ ತನಿಖೆ ನಡೆಸಿ, ಆಕೆಗೆ 34 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕಳೆದ ವರ್ಷದ ಕೊನೆಯಲ್ಲಿ ಸಲ್ಮಾಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ಈ ಶಿಕ್ಷೆಯನ್ನು 34 ವರ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಆಕೆ ಬ್ರಿಟನ್‌ನಿಂದ ತವರಿಗೆ ಬಂದಾಗ ಆಕೆಯನ್ನು ಬಂಧಿಸಲಾಗಿದೆ.
ಇತ್ತೀಚಿನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಲ್ಮಾಗೆ ಒಂದು ತಿಂಗಳ ಅವಕಾಶವಿದೆ. ಸಲ್ಮಾ ಅವರಿಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಶೆಹಬ್ ಕೆಲವು ಸಮಯದಿಂದ ಮಹಿಳೆಯರ ಹಕ್ಕುಗಳಿಗಾಗಿ ಆಂದೋಲನ ನಡೆಸುತ್ತಿದ್ದರು. ಆಕೆಯ ಸಹೋದರಿ ಕೂಡ ಕಾರ್ಯಕರ್ತೆಯಾಗಿದ್ದಾರೆ. ಆಕೆಯು ಕೂಡ ಸಾವಿರಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾಳೆ ಎಂದು ತಿಳಿದು ಬಂದಿದೆ.