ಕೇವಲ 11,999 ರೂ.ಗೆ ಜಿಯೋ ಲಾಂಚ್ ಮಾಡಲಿದೆ 5G ಫೋನ್ !!!
ಕಡಿಮೆ ಬೆಲೆಯ 4ಜಿ ಫೋನ್ ಬಿಡುಗಡೆ ಮಾಡಿದ್ದ ರಿಲಯನ್ಸ್ ಜಿಯೋ ಈಗ ಕಡಿಮೆ ಬೆಲೆಯಲ್ಲಿ 5ಜಿ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ, ಡಿಜಿಟಲ್ ಇಂಡಿಯಾ ಕ್ರಾಂತಿಯನ್ನು ತಳ ಮಟ್ಟಕ್ಕೆ ತರಲಾಗುತ್ತದೆ. ಶೀಘ್ರದಲ್ಲೇ ನಾವು 5ಜಿ ಯುಗವನ್ನು ಪ್ರಾರಂಭಿಸುತ್ತಿದ್ದಂತೆ ಪ್ರತಿ ಹಳ್ಳಿಗಳಿಗೂ ಡಿಜಿಟಲ್ ಸಂಪರ್ಕ ಸಿಗಲಿದೆ ಎಂದು ಹೇಳಿದ್ದರು.
ಈಗ ದೇಶದ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ 12 ಸಾವಿರ ರೂ. ಒಳಗಡೆ ಇರುವ ಫೋನ್ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.
5ಜಿ ಫೋನ್ ದರದ ಬಗ್ಗೆ ರಿಲಯನ್ಸ್ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ. ಸದ್ಯಕ್ಕೆ 12 ಸಾವಿರ ರೂ. ಒಳಗಡೆ ಯಾವುದೇ 5ಜಿ ಫೋನ್ ಲಭ್ಯವಿಲ್ಲ. ಈ ಕಾರಣಕ್ಕೆ 12 ಸಾವಿರ ರೂ. ಒಳಗಡೆ ಫೋನನ್ನು ಜಿಯೋ ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಸ್ಯಾಮ್‌ಸಂಗ್ 5ಜಿ ಫೋನ್ ಬಿಡುಗಡೆ ಮಾಡಿತ್ತು. ಎಂ 13 ಹೆಸರಿನ ಫೋನಿಗೆ 13,990 ರೂ. ದರ ನಿಗದಿಯಾಗಿತ್ತು.
ಜಿಯೋಫೋನ್ ನೆಕ್ಷ್ಟ್ ಖರೀದಿಗೆ ನೀಡಿದಂತೆ ಈ ಫೋನ್ 2,500 ರೂ. ಡಿಸ್ಕೌಂಟ್ ದರದಲ್ಲಿ ಸಿಗುವ ಸಾಧ್ಯತೆಯಿದೆ. ಇದರ ಜೊತೆ ಆಫರ್ ದರದಲ್ಲಿ ಜಿಯೋ ಡೇಟಾ ಪ್ಯಾಕ್ ನೀಡಲಿದೆ ಎನ್ನಲಾಗುತ್ತಿದೆ.
ಗುಣವೈಶಿಷ್ಟ್ಯ ಏನಿರಲಿದೆ?
6.5 ಇಂಚಿನ ಎಚ್‌ಡಿ+ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ(1600×720 ಪಿಕ್ಸೆಲ್), ಕ್ವಾಲಕಂ ಸ್ನಾಪ್‌ಡ್ರಾಗನ್ 480 5G (SM4350) ಅಕ್ಟಾ ಕೋರ್, 13 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮ್ಯಾಕ್ರೋ ಸೆನ್ಸರ್, ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ಇರಲಿದೆ.
2GB/4GB RAM ಮತ್ತು 32GB/64GB ಆಂತರಿಕ ಮೆಮೊರಿ ಇರಲಿದೆ. ಕ್ವಾಲಕಂ ಸ್ನಾಪ್‌ಡ್ರಾಗನ್ 480 5G ಪ್ರೊಸೆಸರ್ 2021ರ ಜನವರಿಯಲ್ಲಿ ಬಿಡುಗಡೆಯಾಗಿದ್ದು, ಎಂಟ್ರಿ ಲೆವೆಲ್ ಆಂಡ್ರಾಯ್ಡ್ ಫೋನ್, ಟ್ಯಾಬ್ಲೆಟ್‌ಗೆ ಬಳಕೆಯಾಗುತ್ತಿದೆ.
ಈ ಫೋನ್‌ನಲ್ಲಿ ಜಿಯೋಫೋನ್ ನೆಕ್ಷ್ಟ್‌ಗೆ ನೀಡಿದಂತೆ ʼಪ್ರಗತಿʼ ಆಪರೇಟಿಂಗ್ ಸಿಸ್ಟಂ ಇರಲಿದೆ. ಗೂಗಲ್ ಮತ್ತು ಜಿಯೋ ಕಂಪನಿಗಳು ಈ ಕಸ್ಟಮೈಸ್ಡ್ ಆಂಡ್ರಾಯ್ಡ್ ಓಎಸ್ ತಯಾರಿಸಿವೆ.
ಬಿಡುಗಡೆ ಯಾವಾಗ?
ಜಿಯೋ ಈ ತಿಂಗಳಿನಲ್ಲೇ 5ಜಿ ಸೇವೆ ನೀಡುವುದಾಗಿ ಹೇಳಿದೆ. ಆರಂಭದಲ್ಲಿ ಮಹಾನಗರಗಳಲ್ಲಿ ಈ ಸೇವೆ ನೀಡಿದರೆ ಮುಂದೆ ಟಯರ್ 2, ಟಯರ್ 3 ನಗರಗಳಲ್ಲಿ ಸೇವೆ ಸಿಗಲಿದೆ. ಜಿಯೋ 5ಜಿ ಫೋನ್ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಜಿಯೋಫೋನ್ ನೆಕ್ಷ್ಟ್ ದೀಪಾವಳಿಯಂದು ಬಿಡುಗಡೆಯಾಗಿತ್ತು.