ನಿಮಗೆ ಗೊತ್ತೇ ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಇರುವ ವ್ಯತ್ಯಾಸ!
1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಹಾಗಾಗಿ ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅದಕ್ಕಾಗಿಯೇ ಅವರ ತ್ಯಾಗ, ಬಲಿದಾನವನ್ನು ನೆನಪು ಮಾಡಿಕೊಳ್ಳುವ ಸಲುವಾಗಿ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.
ಈ ದಿನದಂದು ಧೈರ್ಯ, ತ್ಯಾಗ, ಬಲಿದಾನ, ಶಾಂತಿ, ಮನುಷ್ಯ ಮತ್ತು ಪ್ರಕೃತಿ ನಡುವಿನ ಬಾಂದವ್ಯವನ್ನು ಸಾರುವ ಸಂಕೇತವನ್ನು ಸೂಚಿಸುವ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ದೇಶದ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ಹಾಗೂ ಬೃಹತ್ ಮೈದಾನಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆಯ ಹಾಗೆಯೇ, ಜನವರಿ 26ರ ಗಣರಾಜ್ಯೋತ್ಸವದ ದಿನವೂ ಸಹ ಧ್ವಜಾರೋಹಣವನ್ನು ನೆರವೇರಿಸಲಾಗುತ್ತದೆ. ಈ ಎರಡೂ ಆಚರಣೆಯ ಮಧ್ಯೆ ಕೆಲವು ವ್ಯತ್ಯಾಸಗಳಿವೆ. ಜನವರಿ 26ರಂದು ನೆರೆವೇರಿಸುವ ಧ್ವಜಾರೋಹಣಕ್ಕಿಂತ ಆಗಸ್ಟ್ 15 ರಂದು ನೆರವೇರಿಸುವ ಧ್ವಜಾರೋಹಣ ಹೇಗೆ ವಿಶೇಷ? ಈ ಬಗ್ಗೆ ತಿಳಿಯೋಣ ಬನ್ನಿ.
ಮೊದಲನೇ ವ್ಯತ್ಯಾಸ : ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು, ಧ್ವಜವನ್ನು ಹಗ್ಗದಿಂದ ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ, ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು 15 ಆಗಸ್ಟ್ 1947 ರ ಐತಿಹಾಸಿಕ ಘಟನೆಯನ್ನು ಗೌರವಿಸಲು ಇದನ್ನು ಮಾಡಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಧ್ವಜಾರೋಹಣ ಎನ್ನುತ್ತಾರೆ. ಇಂಗ್ಲೀಷಿನಲ್ಲಿ ಫ್ಲಾಗ್ ಹೋಸ್ಟಿಂಗ್ ಎನ್ನುತ್ತಾರೆ.
ಜನವರಿ 26 ಗಣರಾಜ್ಯೋತ್ಸವದಂದು, ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಧ್ವಜ ಅನಾವರಣ ಎಂದು ಕರೆಯಲಾಗುತ್ತದೆ. ಇಂಗ್ಲಿಷಿನಲ್ಲಿ ಗ್ ಆನ್ ಫರ್ಲಿಂಗ್ ಎಂದು ಕರೆಯಲಾಗುತ್ತದೆ.
ಎರಡನೇ ವ್ಯತ್ಯಾಸ : ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15 ರಂದು ಕೇಂದ್ರ ಸರ್ಕಾರದ ಮುಖ್ಯಸ್ಥರಾದ ಪ್ರಧಾನ ಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ. ಏಕೆಂದರೆ ಸ್ವಾತಂತ್ರ್ಯ ಸಿಕ್ಕ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿರಲಿಲ್ಲ. ಈ ಕಾರಣದಿಂದ ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರಾದ ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸುವುದಿಲ್ಲ. ಈ ದಿನದ ಸಂಜೆ, ರಾಷ್ಟ್ರಪತಿಗಳು ತಮ್ಮ ಸಂದೇಶವನ್ನು ರಾಷ್ಟ್ರಕ್ಕೆ ನೀಡುತ್ತಾರೆ.
ಆದರೆ ದೇಶದಲ್ಲಿ ಸಂವಿಧಾನದ ಅನುಷ್ಠಾನ ಆದ ಸ್ಮರಣಾರ್ಥವಾಗಿ ಆಚರಿಸಲಾಗುವ ಜನವರಿ 26 ಗಣರಾಜೋತ್ಸವ, ಈ ದಿನದಂದು ಸಂವಿಧಾನದ ಮುಖ್ಯಸ್ಥರು ರಾಷ್ಟ್ರಪತಿ ಧ್ವಜಾರೋಹಣ ಮಾಡುತ್ತಾರೆ.
ಮೂರನೇ ವ್ಯತ್ಯಾಸ : ಸ್ವಾತಂತ್ರ್ಯ ದಿನಾಚರಣೆಯ
ದಿನದಂದು ಕೆಂಪು ಕೋಟೆಯಿಂದ ಧ್ವಜಾರೋಹಣವನ್ನು ಮಾಡಲಾಗುತ್ತದೆ. ಆದರೆ ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.
ಭಾರತದ ರಾಷ್ಟ್ರಪತಿ ಗಣರಾಜ್ಯೋತ್ಸವದ ಒಂದು ದಿನ
ಮುಂಚಿತವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಿ ಪ್ರತಿವರ್ಷ ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.