ಬಿಗ್ ಬಾಸ್ ಓಟಿಟಿ | ಕುಡ್ಲದ ಹೀರೋ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ನಡುವೆ ಶುರು ಆಯ್ತಾ ಗುಸು-ಗುಸು
ಬಿಗ್ ಬಾಸ್ ಒಟಿಟಿ ಕನ್ನಡದ ಮೊದಲ ಸೀಸನ್ ಆರಂಭವಾಗಿ ಒಂದು ವಾರ ಸಮೀಪಿಸುತ್ತಿದೆ. ನಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಆರಂಭವಾಗಲಿದ್ದು, ಮನೆಯಿಂದ ಯಾರು ನಿರ್ಗಮಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಿರುವ ವಾಹಿನಿಯು ಸದ್ಯ ಸಖತ್ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಅಂದಾಕ್ಷಣ ಒಮ್ಮೆಗೆ ಗಮನ ಸೆಳೆಯೋದೆ ಟಾಸ್ಕ್, ಜಗಳ. ಅದ್ರ ನಡುವಲ್ಲಿ ಪ್ರೀತಿ ಪ್ರೇಮ.
ಮೊನ್ನೆ ಅಷ್ಟೇ ರಾಕೇಶ್ ಸ್ಫೂರ್ತಿ ನಡುವೆ ಏನೇನೊ ಪಿಸು-ಪಿಸು ಸುರು ಆಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೇ ತುಳುನಾಡ ಕುವರ ಕೋಸ್ಟಲ್ ವುಡ್ ಸ್ಟಾರ್, ನಿರೂಪಕ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅಯ್ಯರ್ ನಡುವೆ ಪ್ರೇಮಾಂಕುರ ಪ್ರಾರಂಭವಾಗಿರುವ ಸುದ್ದಿ ಮೆಲ್ಲ ಮೆಲ್ಲಗೆ ತಿಳಿದು ಬರುತ್ತಿದೆ.
ಹೌದು. ಇಬ್ಬರದ್ದೂ ಉತ್ತಮ ಜೋಡಿ ಎಂದೆಲ್ಲಾ ಇತರ ಸ್ಪರ್ಧಿಗಳು ತಮಾಷೆ ಮಾಡುತ್ತಿದ್ದಾರೆ. ಇನ್ನೊಂದೆಡೆ ರೂಪೇಶ್ ಸಹ ತಾನು ಸಾನಿಯಾಗೆ ಕನೆಕ್ಟ್ ಆಗಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಬಳಿಕ ಅದನ್ನು ಹೇಳಿರುವ ಅರ್ಥ ಬೇರೆ ಎಂದು ಸಮರ್ಥನೆ ಕೂಡ ಮಾಡಿಕೊಂಡಿದ್ದರು.
ಮನೆಯವರು ಕೂಡ ಇಬ್ಬರ ನಡುವೆ ಏನೋ ಇದೆ ಎಂದು ಹೇಳಿದರೂ, ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ನೀವಂದುಕೊಂಡ ರೀತಿಯಲ್ಲಿ ನಮ್ಮ ನಡುವೆ ಏನೂ ಇಲ್ಲ ಎಂಬ ಸಂದೇಶವನ್ನು ರೂಪೇಶ್ ಮತ್ತು ಸಾನ್ಯಾ ರವಾನಿಸಿದರೂ ಇಬ್ಬರ ನಡವಳಿಕೆ ಮತ್ತು ಮಾತುಗಳು ಇಬ್ಬರ ನಡುವೆ ಏನೋ ಇದೆ ಎಂಬುದನ್ನು ಸಾರುತ್ತಿವೆ.
31 ವರ್ಷದ ರೂಪೇಶ್ ಶೆಟ್ಟಿ ಅವರು ಮಂಗಳೂರಿನಲ್ಲಿ ರೇಡಿಯೋ ಜಾಕಿ ಮತ್ತು ವಿಜೆ ಆಗಲು ಪ್ರಯತ್ನಿಸುವುದಕ್ಕಿಂತ ಮುಂಚೆಯೇ ಯೂಟ್ಯೂಬರ್ ಆಗಿ ತಮ್ಮ ಉದ್ಯಮ ವೃತ್ತಿಯನ್ನು ಪ್ರಾರಂಭಿಸಿದರು. ಇದರೊಂದಿಗೆ ಅಮ್ಮರ್ ಪೋಲಿಸಾ, ಗಿರ್ಗಿಟ್ ಮತ್ತು ಇತರೆ ಸೂಪರ್ ಹಿಟ್ ಹಾಸ್ಯ ಚಲನಚಿತ್ರಗಳೊಂದಿಗೆ ತುಳು ಚಿತ್ರರಂಗದಲ್ಲಿ ರೂಪೇಶ್ ಯಶಸ್ಸನ್ನು ಕಂಡುಕೊಂಡಿದ್ದಾರೆ. ಅಲ್ಲದೆ, ಇತ್ತೀಚಿಗೆ ಕನ್ನಡದ ಗೋವಿಂದಾ ಗೋವಿಂದಾ ಚಿತ್ರದಲ್ಲಿ ನಟಿಸಿದ್ದಾರೆ.
ಮತ್ತೊಂದೆಡೆ, ಸಾನ್ಯಾ ಅಯ್ಯರ್ ಅವರು ಜನಪ್ರಿಯ ಟಿವಿ ಧಾರಾವಾಹಿ ಪುಟ್ಟ ಗೌರಿ ಮದುವೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಬಾಲ ನಟಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು. ಕಿರುತೆರೆ ಕಲಾವಿದೆ ಮಾತ್ರವಲ್ಲದೆ, ಮಾಡೆಲ್ ಆಗಿಯು ಸಾನ್ಯಾ ಖ್ಯಾತಿಯನ್ನು ಗಳಿಸಿದ್ದಾರೆ. ಈಗಾಗಲೇ ದೊಡ್ಡ ಮನೆಗೆ ಹೆಜ್ಜೆ ಇಟ್ಟಿರುವ ಇವರು ತಮ್ಮ ಜೀವನದಲ್ಲಿ ನಡೆದ ಅನೇಕ ನೋವಿನ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.