“ಕಾಂಡೋಂ” ಒಳಗೊಂಡಿರುವ ಕಿಟ್ ಗಳನ್ನು ನವವಿವಾಹಿತರಿಗೆ ನೀಡಲಿರುವ ಸರಕಾರ!!!

ನೂತನವಾಗಿ ಮದುವೆಯಾದವರಿಗೆ ಇದೊಂದು ಖುಷಿ ಸುದ್ದಿ ಎಂದೇ ಹೇಳಬಹುದು. ಕಾಂಡೋಮ್‌ಗಳನ್ನು ಒಳಗೊಂಡಿರುವ ಮದುವೆ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.

 

ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಕಾಂಡೋಂ ಸೇರಿದಂತೆ ಇತರ ಆರೋಗ್ಯ ಅಗತ್ಯ ವಸ್ತುಗಳನ್ನು ಹೊಂದಿರುವ ಕುಟುಂಬ ಯೋಜನಾ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸಿದ್ಧವಾಗಿದೆ ಒಡಿಶಾ ಸರಕಾರ.

ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ‘ನಯಿ ಪಹಲ್ ಯೋಜನೆ’ ಎಂಬ ಹೊಸ ಉಪಕ್ರಮವನ್ನು ಜಾರಿಗೆ ತರುತ್ತಿದೆ. ಈ ಯೋಜನೆಯ ಮೂಲಕ ಯುವ ದಂಪತಿಗಳು ತಾತ್ಕಾಲಿಕ ಮತ್ತು ಶಾಶ್ವತವಾದ ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕುಟುಂಬ ಯೋಜನೆ, ವಿವಾಹ ನೋಂದಣಿ ನಮೂನೆ, ಕಾಂಡೋಮ್‌ಗಳು, ಮೌಖಿಕ ಮತ್ತು ತುರ್ತು ಗರ್ಭನಿರೋಧಕಗಳ ವಿಧಾನಗಳು ಮತ್ತು ಪ್ರಯೋಜನಗಳ ಕುರಿತು ಬುಕ್‌ಲೆಟ್ ಹೊಂದಿರುವ ನವವಿವಾಹಿತರಿಗೆ ‘ವೆಡ್ಡಿಂಗ್ ಕಿಟ್‌’ಗಳನ್ನು ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಯೋಜಿಸಿದೆ.

ಹೊಸದಾಗಿ ಮದುವೆಯಾದ ದಂಪತಿಗಳು ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ಪ್ರೋತ್ಸಾಹಿಸಲು ನಾವು ಅವರಿಗೆ ನವ ದಂಪತಿ ಕಿಟ್ ಅಥವಾ ನಯಿ ಪಹಲ್ ಕಿಟ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಕಿಟ್‌ನಲ್ಲಿ ಕುಟುಂಬ ಯೋಜನೆ, ಕಾಂಡೋಮ್‌ಗಳಂತಹ ಗರ್ಭನಿರೋಧಕಗಳು, ತುರ್ತು ಗರ್ಭನಿರೋಧಕ ಮಾತ್ರೆಗಳು ಸೇರಿದಂತೆ ಇತರ ವಸ್ತುಗಳನ್ನು ಒಳಗೊಂಡಿದೆ ಎಂದು ಡಾ‌‌.ಬಿಜಯ್ ಕಿಟ್‌ನಲ್ಲಿರುವ ವಿವರಗಳನ್ನು ಹೇಳಿದ್ದಾರೆ.

ಗರ್ಭಧಾರಣೆಯ ಪರೀಕ್ಷಾ ಕಿಟ್, ಟವೆಲ್, ಬಾಚಣಿಗೆ, ಬಿಂದಿ, ಉಗುರು ಕತ್ತಿರಿಸುವ ಸಾಧನ ಮತ್ತು ಕನ್ನಡಿ ಸೇರಿದಂತೆ ಇತರ ಸಾಮಗ್ರಿಗಳು ಇರಲಿದೆ. ಈ ವರ್ಷದ ಸೆಪ್ಟೆಂಬರ್‌ನಿಂದ ಈ ಮದಿವೆ ಕಿಟ್ ಗಳನ್ನು ನವವಿವಾಹಿತರಿಗೆ ವಿತರಿಸುವ ಕಾರ್ಯವನ್ನು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ (ಆಶಾ) ವಹಿಸಲಾಗುವುದು ಎಂದು ಕುಟುಂಬ ಯೋಜನಾ ನಿರ್ದೇಶಕ ಡಾ. ಬಿಜಯ್ ಪಾಣಿಗ್ರಾಹಿ ಹೇಳಿದರು. ಇದರ ಬಗ್ಗೆ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ.

Leave A Reply

Your email address will not be published.