ಶೋಕಿಗಾಗಿ ಬೈಕ್ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪೊಲೀಸ್ ಬಲೆಗೆ

ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಶೋಕಿ ಮಾಡುವುದಕ್ಕೆ ಅಂತ ದುಬಾರಿ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದವರು ಇದೀಗ ಪೊಲೀಸರ ಅತಿಥಿಗಳಾದ ಘಟನೆ ನಡೆದಿದೆ.

 

ಬಂಧಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಮೂಲದ ಪವನ್ ಹಾಗೂ ಆಂಧ್ರಪ್ರದೇಶದ ಮೂಲದ ಸತೀಶ್.

ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದರು. ಆದರೆ, ಪವನ್​ ಅರ್ಧಕ್ಕೆ ಕಾಲೇಜು ನಿಲ್ಲಿಸಿದ್ದ. ಇತ್ತ ಸತೀಶ್​ ಮಾತ್ರ ಬಿ.ಟೆಕ್ ಮುಂದುವರಿಸಿದ್ದ. ಇವರಿಬ್ಬರ ಗೆಳೆತನ ಶೋಕಿಗಾಗಿ ಅಡ್ಡದಾರಿಯನ್ನ ಹಿಡಿಯುವಂತೆ ಮಾಡಿದೆ. ಹೌದು. ಇಬ್ಬರು ಸೇರಿ ಬೈಕ್​ಗಳನ್ನು ಕದಿಯೋ ಕೆಲಸಕ್ಕೆ ಇಳಿದಿದ್ದಾರೆ.

ಹೀಗೆ, ಕದ್ದ ಬೈಕ್​ ಒಂದನ್ನು ಆಂಧ್ರಕ್ಕೆ ತೆಗೆದುಕೊಂಡು ಹೋಗುವಾಗ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಸೇರಿ ಕಳ್ಳತನ ಮಾಡಿದ್ದ 12 ರಾಯಲ್ ಎನ್​​ಫೀಲ್ಡ್ ಬೈಕ್, 2 ಡ್ಯೂಕ್, ಒಂದು ಪಲ್ಸಾರ್ ಎನ್ ಎಸ್, ಒಂದು ಡ್ಯೂಕ್ ಬೈಕ್​​ಗಳನ್ನು ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೈಕ್​​ಗಳನ್ನು ಕಳವು ಮಾಡಿದ್ದ ಈ ಇಬ್ಬರು ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಅದರಿಂದ ಬರುತ್ತಿದ್ದ ಹಣದಿಂದ ಶೋಕಿ ಮಾಡುತ್ತಿದ್ದರು. ಇದೀಗ ಪೋಲಿಸರ ಬಲೆಗೆ ಬಿದ್ದಿದ್ದು, ಕಂಬಿ ಎನಿಸುವಂತೆ ಆಗಿದೆ.

Leave A Reply

Your email address will not be published.