ಉಡುಪಿ: ಕಾಲು ಸಂಕ ದಾಟುವಾಗ ನೀರಿಗೆ ಬಿದ್ದಿದ್ದ ಬಾಲಕಿಯ ಮೃತದೇಹ ಪತ್ತೆ!
ಉಡುಪಿ: ಶಾಲಾ ಬಾಲಕಿಯೊಬ್ಬಳು ಕಾಲು ಸಂಕದಿಂದ ಜಾರಿ ನೀರಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಬೀಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ನಡೆದಿತ್ತು. ಸತತ ಮೂರು ದಿನಗಳ ಕಾರ್ಯಚರಣೆಯ ಬಳಿಕ ಇದೀಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಸೋಮವಾರ ಸಂಜೆ ಶಾಲೆ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ. 2ನೇ ತರಗತಿಯ ಬಾಲಕಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಗಳ ಪುತ್ರಿ ಸಾನಿಧ್ಯ ಕಾಲು ಸಂಕವೊಂದರ ಮೂಲಕ ದಾಟುವಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಳು.
ಬಳಿಕ ಅಧಿಕಾರಿಗಳ, ಪೋಲಿಸರ ಹಾಗೂ ಊರಿನವರ ಸಹಕಾರದೊಂದಿಗೆ ಬಾಲಕಿಯ ಹುಡುಕಾಟ ನಡೆಸಲಾಗಿತ್ತು. ಬುಧವಾರ ಸಂಜೆ ಆಕೆಯ ಮೃತದೇಹ ಕಾಲುಸಂಕದಿಂದ 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಇಂದು ಕುಟುಂಬಕ್ಕೆ ಮೃತ ದೇಹ ಹಸ್ತಾಂತರಿಸಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಮಾರ್ಗದರ್ಶನದಲ್ಲಿ ಬಾಲಕಿ ಮೃತದೇಹ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಎನ್., ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಸ್ಥಳದಲ್ಲಿದ್ದರು.
ಬೈಂದೂರಿನಲ್ಲಿ 2ನೇ ತರಗತಿ ಬಾಲಕಿ ಕಾಲು ಸಂಕದಿಂದ ಬಿದ್ದು ಕೊಚ್ಚಿಹೋಗಿರುವ ಘಟನೆ ವಿಷಾದನೀಯ. ಮುಂದೆ ಜಿಲ್ಲೆಯಲ್ಲಿ ಇಂತಹ ಘಟನೆ ಸಂಭವಿಸಕೂಡದು. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕಾಲು ಸಂಕ ಗುರುತಿಸಿ ನರೇಗಾ ಯೋಜನೆಯಡಿ ಸೇತುವೆ ರಚನೆಗೆ ಅದೇಶಿಸಿದ್ದೇನೆ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.